ವಿಶ್ವವನ್ನೇ ಕಾಡುತ್ತಿರುವ ಮಾನಸಿಕ ಸಮಸ್ಯೆ: ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಆತಂಕ

World Mental Health Day Mandya
Published on

ಮಂಡ್ಯ: ಪ್ರಸ್ತುತ ದಿನಗಳಲ್ಲಿ ಮಾನಸಿಕ ಸಮಸ್ಯೆ ಇಡೀ ವಿಶ್ವವನ್ನೇ ಕಾಡುತ್ತಿದೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಆತಂಕ ವ್ಯಕ್ತಪಡಿಸಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜಿನ ವನರಂಗದಲ್ಲಿ ಕೃಷಿಕ ಅಲಯನ್ಸ್ ಸಂಸ್ಥೆ, ಮನೋವಿಜ್ಞಾನ ವಿಭಾಗ, ಸಮಾಜಶಾಸ ವಿಭಾಗ, ಯೂತ್ ರೆಡ್‌ಕ್ರಾಸ್ ಘಟಕ ಹಾಗೂ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಆಯೋಜಿಸಿದ್ದ ಅರಿವು, ಸಂವಾದ ಮತ್ತು ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಪಂಚದಲ್ಲಿ ಸುಮಾರು 110 ಕೋಟಿ ಜನ ಮಾನಸಿಕ ಅಸ್ವಸ್ಥ್ಯತೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲೇ ಸುಮಾರು 18 ಕೋಟಿ ಜನ ಮಾನಸಿಕ ರೋಗಗಳಿಂದ ಬಳಲುತ್ತಿದ್ದಾರೆ. ಜಗತ್ತಿನ ಶೇ.14ರಷ್ಟು ಜನ ಒಂದಲ್ಲ ಒಂದು ಮಾನಸಿಕ ಕಾಯಿಲೆಯಿಂದ ನರಳುತ್ತಿದ್ದಾರೆ ಎಂದು ನುಡಿದರು.

ಶೇ.100 ಜನ ಮಾನಸಿಕ ರೋಗಗಳ ತೊಂದರೆಯುಳ್ಳವರಲ್ಲಿ ಶೇ.20ರಷ್ಟು ಜನರು ಮಾತ್ರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವಿಶ್ವ ಮಾನಸಿಕ ಆರೋಗ್ಯ ಸಂಸ್ಥೆ ಇಂತಹ ಗಂಭೀರತೆಯನ್ನು ಅರಿತು ಮಾನಸಿಕ ಮತ್ತು ದೈಹಿಕ ಆರೋಗ್ಯ ರಕ್ಷಣೆಗಾಗಿ ಅರಿವು ಮೂಡಿಸಲು ಮುಂದಾಗಿದೆ. 2025ರ ಘೋಷವಾಕ್ಯ ‘ದುರಂತಗಳು ಮತ್ತು ತುರ್ತು ಪರಿಸ್ಠಿತಿಗಳಲ್ಲಿ ಮಾನಸಿಕ ಆರೋಗ್ಯ ಸೇವೆಗಳಿಗೆ ಪ್ರವೇಶ’ ಎಂಬುದಾಗಿದೆ. ಮಾನಸಿಕ ಆರೋಗ್ಯ ಇಲ್ಲದ ಮನುಷ್ಯ ಉತ್ತಮ ಜೀವನ ನಡೆಸಲು, ಆರೋಗ್ಯದಿಂದ ಇರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ ಅವರು, ಒತ್ತಡದ ಜೀವನ ಶೈಲಿಯಿಂದ ಮನಸ್ಸಿಗೆ ಉಲ್ಲಾಸ ನೀಡಲು ಸಂಗೀತ ಕೇಳುವುದು. ಕೃತಿ ಓದುವುದು ಉತ್ತಮ, ದಿನನಿತ್ಯ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಮನೋಬಲದಿಂದ ಎಲ್ಲವನ್ನು ಎದುರಿಸುವ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಅರಿವು ಮುಖ್ಯ ಎಂದರು.

ಪ್ರಾಂಶುಪಾಲ ಪ್ರೊ.ಕೆ.ಗುರುರಾಜ್‌ಪ್ರಭು ಮಾತನಾಡಿ, ವಿದ್ಯಾರ್ಥಿನಿಯರು ಉತ್ತಮ ಮಾನಸಿಕ ಸ್ಥಿಮಿತತೆ ಬೆಳೆಸಿಕೊಳ್ಳಬೇಕಿದೆ. ಆರೋಗ್ಯ ಕಾಪಾಡಿಕೊಳ್ಳಲು ನಿರಂತರ ಪ್ರಯತ್ನಬೇಕು. ದೈಹಿಕ ಮತ್ತು ಮಾನಸಿಕವಾಗಿ ಸಮತೋಲನ ಕಾಯ್ದುಕೊಳ್ಳಬೇಕು. ಮಾನಸಿಕ ನೆಮ್ಮದಿಗಾಗಿ ಇತಿಹಾಸ, ವೇದೋಪನಿಷತ್, ಭಗವದ್ಗಿತೆ ಗ್ರಂಥಗಳಲ್ಲಿ ಮನಸ್ಸನ್ನು ಹೇಗೆ ನಿಯಂತ್ರಿಸಬೇಕು ಎನ್ನುವ ಮಾಹಿತಿ ಇದೆ. ಆರೋಗ್ಯ ರಕ್ಷಣೆಗೆ ಏನು ಮಾಡಬೇಕು ಎನ್ನುವುದು ದಾಖಲಾಗಿದೆ ಎಂದರು.

ಮನೋರೋಗ ವಿಭಾಗ ಮುಖ್ಯಸ್ಥ ಡಾ.ಆರ್.ಜಯರಾಜು, ಅಲಯನ್ಸ್ ಸಂಸ್ಥೆ 2ನೇ ಉಪ ಪ್ರಾಂತಪಾಲ ಕೆ.ಎಸ್.ಚಂದ್ರಶೇಖರ್, ಸಮಾಜವಿಭಾಗ ಮುಖ್ಯಸ್ಥ ಡಾ.ಎಚ್.ಎಸ್.ನಾಗರಾಜು, ಯೂತ್ ರೆಡ್‌ಕ್ರಾಸ್ ಮತ್ತು ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಎಸ್.ನವೀನ್, ಬಿ.ಎನ್.ಪುಷ್ಪಲತಾ, ಸಿ.ಅಶೋಕ್, ಕೃಷಿಕ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಎ.ಆರ್.ಕುಮಾರ್, ಕಸಾಪ ಕೋಶಾಧ್ಯಕ್ಷ ಧನಂಜಯ ದರಸಗುಪ್ಪೆ ಇತರರಿದ್ದರು.

ಇದೇ ಸಂದರ್ಭದಲ್ಲಿ ಮನೋರೋಗ ಮತ್ತು ಸೀ ರೋಗಗಳ ತಜ್ಞರು ಉಪನ್ಯಾಸ ನೀಡಿದರು. ವಿದ್ಯಾರ್ಥಿನಿಯರ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು. ಪ್ರತಿಭಾಂಜಲಿ ಸಂಗೀತ ಅಕಾಡೆಮಿಯಿಂದ ಗಾಯಕರಿಂದ ಗಾಯನ ಮತ್ತು ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net