ಬೇಸರವಿದ್ದರೆ ಸ್ನೇಹಿತರೊಂದಿಗೆ ಹಂಚಿಕೊಳ್ಳಿ: ಹಿರಿಯ ಸಿವಿಲ್ ನ್ಯಾಯಾಧೀಶೆ ವಾಣಿ ಎ.ಶೆಟ್ಟಿ ಕಿವಿಮಾತು

World Mental Health Day mandya
Published on

ಮಂಡ್ಯ: ಯಾರಾದರೂ ಖಿನ್ನತೆಗೆ ಒಳಗಾಗಿದ್ದರೆ, ನಿಮ್ಮ ಬೇಸರವನ್ನು ಸ್ನೇಹಿತರು ಅಥವಾ ಸಂಬಂಧಿಕರೊಂದಿಗೆ ಹಂಚಿಕೊಳ್ಳಿ. ಆಗ ಮನಸ್ಸು ನಿರಾಳವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ವಾಣಿ ಎ.ಶೆಟ್ಟಿ ಕಿವಿಮಾತು ಹೇಳಿದರು.

ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಆರೋಗ್ಯ ಸಂಘ (ಮಾನಸಿಕ ವಿಭಾಗ), ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರೋಟರಿ ಸಂಸ್ಥೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಮಾತನಾಡಿದರು.

ಒಬ್ಬ ವ್ಯಕ್ತಿ ಆರೋಗ್ಯವಾಗಿರಬೇಕಾದರೆ ಮನಸ್ಸು ಮತ್ತು ದೇಹ ಸುಸ್ಥಿತಿಯಲ್ಲಿರಬೇಕು. ಮಾನಸಿಕ ಆರೋಗ್ಯದಲ್ಲಿ ಏನಾದರೂ ಏರು ಪೇರು ಉಂಟಾದರೆ ಅದು ನಮ್ಮ ದೇಹದ ಮೇಲೆ ಪ್ರಭಾವ ಬೀರುತ್ತದೆ. ಮಾನಸಿಕ ಖಿನ್ನತಯಿಂದ ಬಳಲುತ್ತಿದ್ದರೆ ಸಮಾಜ ನಮ್ಮನ್ನು ನೋಡುವ ದೃಷ್ಟಿಯೇ ಬೇರೆಯಾಗಿರುತ್ತದೆ. ಆದ್ದರಿಂದ ಇಂತಹ ಖಿನ್ನತೆ ಹೋಗಲಾಡಿಸುವ ನಿಟ್ಟಿನಲ್ಲಿ ದೈನಂದಿನ ಯೋಗ ಮತ್ತು ಜ್ಞಾನ ಮಾಡುವುದು ಉತ್ತಮ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಎಂ.ಸಿ.ಸೋಮಶೇಖರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶೇ.100ಕ್ಕೆ ಶೇ.13 ರಿಂದ 14ರಷ್ಟು ಜನರಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆ ಕಾಣಿಸುತ್ತಿದೆ. ಇಂತಹವರನ್ನು ಗುಣಪಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಜಿಲ್ಲಾ ಕಾರಾಗೃಹದ ಅಧೀಕ್ಷಕ ಟಿ.ಕೆ.ಲೋಕೇಶ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ಆರ್.ಗಾಯತ್ರಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ಡಾ.ಎಂ.ಮಮತಾ, ಜಿಲ್ಲಾ ಕ್ಷಯ ರೋಗ ನಿರ್ಮಲನಾಧಿಕಾರಿ ಡಾ.ಎಂ.ಎನ್.ಆಶಾಲತಾ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಆರ್.ನಟರಾಜು, ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣಾಧಿಕಾರಿ ಡಾ.ಎನ್.ಕಾಂತರಾಜು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್, ರೋಟರಿ ಸಂಸ್ಥೆಯ ಅಧ್ಯಕ್ಷೆ ಬಿ.ಎಸ್.ಅನುಪಮಾ, ಕಾರ್ಯದರ್ಶಿ ರಾಜೇಶ್ ಇತರರಿದ್ದರು.

ಇದೇ ಸಂದರ್ಭದಲ್ಲಿ ವಿಶ್ವ ಮಾನಸಿಕ ದಿನಾಚರಣೆಯ ಸಂಪೂರ್ಣ ಮಾಹಿತಿ ಇರುವ ಕೈಪಿಡಿ ಬಿಡುಗಡೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net