ಅ.4ರಿಂದ ಮಾನಸಿಕ ಆರೋಗ್ಯ ಯೋಗಕ್ಷೇಮ ಸಪ್ತಾಹ

udp-bhandari
Published on

ಉಡುಪಿ: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಲಯನ್ಸ್​ ಕ್ಲಬ್​ ಮತ್ತು ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಸಹಯೋಗದಲ್ಲಿ ಅ. 4ರಿಂದ 12ರವರೆಗೆ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಸಪ್ತಾಹ ಆಯೋಜಿಸಲಾಗಿದೆ ಎಂದು ಲಯನ್ಸ್​ ಜಿಲ್ಲಾ ಗವರ್ನರ್​ ಸಪ್ನಾ ಸುರೇಶ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅ.4ರಂದು ಬೆಳಿಗ್ಗೆ 10.30ಕ್ಕೆ ಬ್ರಹ್ಮಾವರ ಹಾರಾಡಿಯ ಡಾ. ಎ.ವಿ. ಬಾಳಿಗಾ ಸಮುದಾಯ ಭವನದಲ್ಲಿ ಸಪ್ತಾಹದ ಉದ್ಘಾಟನೆ ನಡೆಯಲಿದ್ದು, ಬಳಿಕ ಅಭಯ ಮತ್ತು ಬಂಧು ಡೇ ಕೇರ್​ ಸೆಂಟರ್​ ನಲ್ಲಿನ ನಿವಾಸಿಗಳಿಗೆ ಸಮಾಲೋಚನೆ ಮತ್ತು ಸಂವಹನ ಆಟಗಳನ್ನು ಹಮ್ಮಿಕೊಳ್ಳಲಾಗಿದೆ. ಅ. 5ರಂದು ಬೆಳಿಗ್ಗೆ 9.30ಕ್ಕೆ ಶಂಕರಪುರ ರೋಟರಿ ಕ್ಲಬ್​ ನಲ್ಲಿ ಮಾನಸಿಕ ಆರೋಗ್ಯ ಶಿಬಿರ ಮತ್ತು ಮಾನಸಿಕ ಆರೋಗ್ಯದಲ್ಲಿ ಸರ್ಕಾರಿ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಲಿದೆ. ಅ.6ರಂದು ಮಣಿಪಾಲ ಮಾಧವಕೃಪಾ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ "ಪರೀಕ್ಷಾ ಒತ್ತಡವನ್ನು ನಿಭಾಯಿಸುವುದು ಹಾಗೂ ಗೆಳೆಯರ ಒತ್ತಡವನ್ನು ನಿರ್ವಹಿಸುವುದು" ವಿಷಯದ ಕುರಿತು ಡಾ. ವಿರೂಪಾಕ್ಷ ದೇವರಮನೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅ.7ರಂದು ಮಧ್ಯಾಹ್ನ 2.30ಕ್ಕೆ ಮಣಿಪಾಲ್​ ಟೆಕ್ನಾಲಜೀಸ್​ ಯುನಿಟ್​&5 ನಳಂದ ಹಾಲ್​ನಲ್ಲಿ ಕಾಪೋರ್ರೇಟ್​ ವಲಯದ ಉದ್ಯೋಗಿಗಳಿಗೆ ಒತ್ತಡ ನಿರ್ವಹಣೆ ಕುರಿತು ಮಾಹಿತಿ ಕಾರ್ಯಾಗಾರ , ಅ.8ರಂದು ಮಧ್ಯಾಹ್ನ 2.30ಕ್ಕೆ ಮಣಿಪಾಲ ಮಾಧವಕೃಪಾ ಶಾಲೆಯಲ್ಲಿ ಪ್ರಬಂಧ ಸ್ಪರ್ಧೆ ಹಾಗೂ ಸಾಯಂಕಾಲ 4.30ರಿಂದ ಕೆಎಂಸಿ ಸಂವಹನ ಸಭಾಂಗಣದಲ್ಲಿ ಮಹಿಳೆಯರಲ್ಲಿನ ಮಾನಸಿಕ ಆರೋಗ್ಯದ ಕುರಿತು ಮಾಹಿತಿ ಶಿಬಿರ, ಅ.9ರಂದು ಮಣಿಪಾಲದ ಗ್ರೀನ್​ ವ್ಯಾಲಿ ಪ್ಯಾರಡೈಸ್​ ನಲ್ಲಿ ಮರೆಗುಳಿತನ ಮತ್ತು ಜೀವನಶೈಲಿ ಮಾರ್ಪಾಡು ಕುರಿತು ಶಿಬಿರ, ಅ.10ರಂದು ಬೆಳಿಗ್ಗೆ 9.30ಕ್ಕೆ ದೊಡ್ಡಣಗುಡ್ಡೆ ಡಾ. ಎ.ವಿ. ಬಾಳಿಗಾ ಆಸ್ಪತ್ರೆಯ ಸಭಾಂಗಣದಲ್ಲಿ 'ವಿಶ್ವ ಮಾನಸಿಕ ಆರೋಗ್ಯ ದಿನದ ಕಾರ್ಯಕ್ರಮ ಹಾಗೂ ಮನೋವಿಜ್ಞಾನ ಮತ್ತು ಸಮಾಜಕಾರ್ಯ ವಿದ್ಯಾರ್ಥಿಗಳಿಗೆ ಕಾರ್ಯಾಗಾರ, ಅ.11ರಂದು ಬೆಳಿಗ್ಗೆ 7ಗಂಟೆಯಿಂದ ಉಡುಪಿ ಕ್ಲಾಕ್​ ಟವರ್​ ನಿಂದ ಅಜ್ಜರಕಾಡಿನ ಭುಜಂಗ ಪಾರ್ಕ್​ ವರೆಗೆ ವಾಕಥಾನ್​ ನಡೆಯಲಿದೆ. ಅ.12ರಂದು ಬೆಳಿಗ್ಗೆ 9.30ಕ್ಕೆ ಮಣಿಪಾಲ ಶಿವಪಾಡಿ ದೇವಸ್ಥಾನದಲ್ಲಿ ಸ್ಲಂ ಮಕ್ಕಳಿಗಾಗಿ ಆಪ್ತ ಸಲಹಾ ಕೇಂದ್ರ ಮತ್ತು ಮಾಸಿಕ ಮಾನಸಿಕ ಆರೋಗ್ಯ ಸಹಾಯವಾಣಿ ಆರಂಭವಾಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಐಎಂಎ ಅಧ್ಯಕ್ಷ ಡಾ. ಸುರೇಶ್​ ಶೆಣೈ, ಲಯನ್ಸ್​ ಕ್ಲಬ್​ ಮಣಿಪಾಲ ಅಧ್ಯಕ್ಷ ಗಣೇಶ್​ ಪೈ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net