

ಬೆಳಗಾವಿ: ಸಕ್ಕರೆ ಜಿಲ್ಲೆ, 2ನೇ ರಾಜಧಾನಿ, ಕುಂದಾನಗರಿ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲೀಗ ಉಪಚುನಾವಣೆ ಘೋಷಣೆಯಾದ ಬಳಿಕ ವಿವಿಧ ಪಕ್ಷಗಳಲ್ಲಿ ಬಿಸಿಲಿನ ಝಳದ ಜತೆಗೆ ಚುನಾವಣೆಯ ಕಾವು ಸಹ ಏರತೊಡಗಿದೆ.
8 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಭಾರತೀಯ ಜನತಾ ಪಕ್ಷದ ಹೈಕಮಾಂಡ್, ಲಿಂಗಾಯತ ಸಮುದಾಯದ ಮುಖಂಡರಿಗೆ ಟಿಕೆಟ್ ನೀಡಬೇಕೋ? ಅಥವಾ ಬೇಡವೋ ಎಂಬ ಕುರಿತು ಇನ್ನೂ ಗುಣಾಕಾರ-ಭಾಗಾಕಾರ ಮಾಡುತ್ತಲೇ ಇದ್ದಾರೆ.
‘ಕೈ’ಪಾಳಯ ಚುರುಕು: ಕೈ ಪಾಳಯದಲ್ಲಿ ತಮ್ಮದೇ ಆದ ಪ್ರಭುತ್ವ ಹೊಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರನ್ನು ಉಪಚುನಾವಣೆಯಲ್ಲಿ ಕಣಕ್ಕಿಳಿಸಲು ಕೈ ಪಾರ್ಟಿ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. ಒಳಗೊಳಗೆ ಉಪಚುನಾವಣೆ ಎದುರಿಸಲು ಕಾರ್ಯಕರ್ತರು ತಯಾರಿ ನಡೆಸಿದ್ದಾರೆ. ಜೆಡಿಎಸ್ ಅಂತೂ ಬೆಳಗಾವಿಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಪ್ರಬಲ ಸಮುದಾಯವಾಗಿರುವ ಲಿಂಗಾಯತ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ ಮಾತ್ರ ಚುನಾವಣೆ ಕಣ ರಂಗೇರಲಿದೆ. ಇಲ್ಲದಿದ್ದರೆ, ಎಂದಿನಂತೆ ಜಿಲ್ಲೆಯಲ್ಲಿ ಮತ್ತೆ ಹೊಂದಾಣಿಕೆ ರಾಜಕಾರಣ ರಾರಾಜಿಸಲಿದೆ.
ರೈಲ್ವೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಸುರೇಶ ಅಂಗಡಿ ಅವರ ಅಕಾಲಿಕ ನಿಧನರಾಗಿ ಇದೇ ಮಾ. 23ಕ್ಕೆ ಆರು ತಿಂಗಳಾಗಲಿದೆ. ಹೀಗಾಗಿ ಬಿಜೆಪಿ ಬಾವುಟ ಹಿಡಿದು, ದಿ.ಅಂಗಡಿ ಅವರ ಅನುಕಂಪದ ಅಲೆಯಲ್ಲಿ ಗೆದ್ದು ವಿಜಯದ ಮಾಲೆ ಧರಿಸುವುದಕ್ಕಾಗಿ ಭಾರತೀಯ ಜನತಾ ಪಕ್ಷದಲ್ಲಿ ಆಕಾಂಕ್ಷಿಗಳ ಹಿಂಡು ದೆಹಲಿಯಲ್ಲಿ ಪ್ರದಕ್ಷಿಣೆ ಹಾಕುತ್ತಿದೆ. ದಿ.ಸುರೇಶ ಅಂಗಡಿ ಅವರು ಸುಪುತ್ರಿ ಶ್ರದ್ಧಾ ಅಂಗಡಿ, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ, ಸಂಜಯ ಪಾಟೀಲ, ನ್ಯಾಯವಾದಿ ಎಂ.ಬಿ.ಝಿರಲಿ, ಡಾ.ರವಿ ಪಾಟೀಲ ಅವರ ಪಟ್ಟಿಯೂ ಈಗ ಹೈಕಮಾಂಡ್ ಅಂಗಳದಲ್ಲಿದೆ. ಮಾ.24ರ ವರೆಗೆ ಬಿಜೆಪಿಯ ಅಂತಿಮ ಅಭ್ಯರ್ಥಿ ಘೋಷಣೆಯಾಗುವ ನಿರೀಕ್ಷೆಯಿದೆ. ‘ಡೆಮ್ಮಿ’ ಅಭ್ಯರ್ಥಿಗೆ ಟಿಕೆಟ್ ನೀಡಿದರೆ, ಕಾಂಗ್ರೆಸ್ ಉಮೇದುವಾರನಿಗೆ ಗೆಲುವಿನ ದಾರಿ ಸುಗಮವಾಗಲಿದೆ ಎಂದು ಸ್ಥಳೀಯ ಕಮಲ ಪಡೆಯ ಪ್ರಮುಖರು ಹೇಳಿದ್ದಾರೆ.
ಅಕಾಲಿಕ ನಿಧನರಾಗಿರುವ ಸುರೇಶ ಅಂಗಡಿ ಅವರ ಕುರಿತಾಗಿರುವ ಅನುಕಂಪದ ಅಲೆಯೂ ಈ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಉಪಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಕಣಕ್ಕೆ ಇಳಿಸುವ ಯಾವುದೇ ಅಭ್ಯರ್ಥಿಯನ್ನು ನಾವು ಪ್ರಾಮಾಣಿಕ ಪ್ರಯತ್ನದಿಂದ ಗೆಲ್ಲಿಸಲು ಶ್ರಮಿಸುತ್ತೇವೆ.| ಡಾ.ಪ್ರಭಾಕರ ಕೋರೆ ಕಾರ್ಯಾಧ್ಯಕ್ಷರು, ಕೆಎಲ್‌ಇ ಸಂಸ್ಥೆ ಬೆಳಗಾವಿ
| ರಾಯಣ್ಣ ಆರ್.ಸಿ. ಬೆಳಗಾವಿ