ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣವಿಲ್ಲ: ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಕಾಂತರಾಜು ಹೇಳಿಕೆ

World Malaria Day Mandya
Published on

ಮಂಡ್ಯ: ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ಕಂಡುಬಂದಿಲ್ಲ. ಆದಾಗ್ಯೂ ಜನರು ಸಾಧ್ಯವಾದಷ್ಟು ಸೊಳ್ಳೆ ಕಚ್ಚುವಿಕೆಯಿಂದ ದೂರವಿರಿ ಎಂದು ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಕಾಂತರಾಜು ಹೇಳಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಆರೋಗ್ಯ ಇಲಾಖೆಯಿಂದ ವಿಶ್ವ ಮಲೇರಿಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜೂನ್‌ನಿಂದ ಮಳೆಗಾಲ ಶುರುವಾಗಲಿದೆ. ಸೊಳ್ಳೆಗಳ ಸಂತಾನೋತ್ಪಾತಿ ಹೆಚ್ಚಾಗುವ ಸಾಧ್ಯತೆಯಿದೆ. ಇವುಗಳಿಂದ ಮಲೇರಿಯಾ ಹಾಗೂ ರೋಗವಾಹಕ ಆಶ್ರಿತ ರೋಗಗಳು ಬರುವ ಸಾಧ್ಯತೆಯಿದೆ ಎಂದರು.

ಮಲೇರಿಯಾ ಅನಾಫಲೀಸ್ ಎಂಬ ಸೋಂಕಿತ ಹೆಣ್ಣು ಸೊಳ್ಳೆ ಕಚ್ಚಿದರೆ ಬರುವಂತಹ ಕಾಯಿಲೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆಯನ್ನು ಸಹ ಹೊಂದಿದ್ದು, ಪ್ರತಿಯೊಬ್ಬರೂ ಜಾಗರೂಕರಾಗಿರಿ. ಸೊಳ್ಳೆಗಳನ್ನು ನಿಯಂತ್ರಿಸಲು ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಕಟ್ಟಡಗಳ ನಿರ್ಮಾಣ ಪ್ರದೇಶ ಹಾಗೂ ಇತರ ಅಭಿವೃದ್ಧಿ ಕಾಮಗಾರಿ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಬೇಕು. ಜಾನುವಾರುಗಳು ನೀರು ಕುಡಿಯುವ ಶೇಖರಣಾ ತೊಟ್ಟಿಗಳನ್ನು ವಾರಕ್ಕೊಮ್ಮೆ ಸ್ವಚ್ಚಗೊಳಿಸಬೇಕು. ಶಾಶ್ವತ ನೀರಿನ ತಾಣ ಹಾಗೂ ಕಾರಂಜಿಗಳಲ್ಲಿ ಲಾರ್ವಾಹಾರಿ ಮೀನು ಮರಿ ಬಿಡಬೇಕು. ಸೊಳ್ಳೆ ಕಡಿತದಿಂದ ಪಾರಾಗಲು ಸ್ವಯಂ ರಕ್ಷಣಾ ವಿಧಾನ ಸಹ ಅನುಸರಿಸಿ ಎಂದು ಸಲಹೆ ನೀಡಿದರು.

ಸಾರ್ವಜನಿಕರಲ್ಲಿ ಮಲೇರಿಯಾ ಕಾಯಿಲೆ ಕುರಿತು ಅರಿವು ಮೂಡಿಸಬೇಕೆಂಬುವುದು ಜಾಥದ ಪ್ರಮುಖ ಉದ್ದೇಶವಾಗಿದೆ. ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ನಿವಾಸಿಗಳಲ್ಲಿ ಹಾಗೂ ಕುಟುಂಬಸ್ಥರಲ್ಲಿ ಮಲೇರಿಯಾ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಿ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಕ್ಷಯರೋಗ ಹಾಗೂ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಆಶಾಲತಾ, ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ ಇತರರಿದ್ದರು. ಜಾಗೃತಿ ಜಾಥಾವು ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಹೊರಟು ಬೆಂಗಳೂರು-ಮೈಸೂರು ಮುಖ್ಯರಸ್ತೆ ಮುಖಾಂತರ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಅಂತ್ಯಗೊಂಡಿತು. ವಿವಿಧ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net