

ಪಂಕಜ ಕೆ.ಎಂ. ಬೆಂಗಳೂರು
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಶ್ವಾಸಕೋಶದ ಕ್ಯಾನ್ಸರ್ ಜಾಗತಿಕವಾಗಿ ಅತಿ ಹೆಚ್ಚು ಸಾವಿನ ಪ್ರಕರಣಗಳನ್ನು ಹೊಂದಿದೆ. ಶ್ವಾಸಕೋಶ ಕ್ಯಾನ್ಸರ್‌ಗೆ ಧೂಮಪಾನವೇ ಪ್ರಮುಖ ಕಾರಣ. ವಾಯುಮಾಲಿನ್ಯ, ಪರೋಕ್ಷ ಧೂಮಪಾನ (ಪ್ಯಾಸಿವ್ ಸ್ಮೋಕ್), ಕೆಲಸದ ಸ್ಥಳಗಳು, ಅನುವಂಶಿಕ, ಆಹಾರ ಕ್ರಮ ಮತ್ತು ಜೀವನ ಶೈಲಿಯಿಂದಲೂ ಬರುತ್ತದೆ.
ಜಗತ್ತಿನಾದ್ಯಂತ ಪ್ರತಿ ವರ್ಷ 20-22 ಲಕ್ಷ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಅದೇ ರೀತಿ ಭಾರತದಲ್ಲಿ 80 ಸಾವಿರ ಹಾಗೂ ಕರ್ನಾಟಕದಲ್ಲಿ 5-8 ಸಾವಿರ ಹೊಸ ರೋಗಿಗಳು ಪತ್ತೆಯಾಗುತ್ತಾರೆ. ಮರಣ ಪ್ರಮಾಣ ಶೇ. 80.7 ಇದೆ. ಇದರಲ್ಲಿ ಶೇ. 85 ಮಂದಿ ಕಾಯಿಲೆ ತೀವ್ರಗೊಂಡ ನಂತರ ಆಸ್ಪತ್ರೆಗಳಿಗೆ ಬರುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಜನರಲ್ಲಿ ಜಾಗೃತಿ ಅಗತ್ಯವಿದೆ.
ಶ್ವಾಸಕೋಶದ ಕ್ಯಾನ್ಸರ್ ಪುರುಷರನ್ನು ಹೆಚ್ಚು ಕಾಡುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಲ್ಲೂ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಬಹುತೇಕರಲ್ಲಿ ತಡವಾಗಿ ಪತ್ತೆಯಾಗುತ್ತಿದೆ. ಅರಿವಿನ ಕೊರತೆಯಿಂದಾಗಿ ಶೇ.15 ಮಂದಿಯಲ್ಲಿ ಮಾತ್ರ ಪ್ರಾರಂಭಿಕ ಹಂತದಲ್ಲಿ ಕಾಯಿಲೆ ಪತ್ತೆ ಮಾಡಲು ಸಾಧ್ಯವಾಗುತ್ತಿದೆ. ಶ್ವಾಸಕೋಶ ಕ್ಯಾನ್ಸರ್‌ಗೆ ಒಳಗಾದವರಲ್ಲಿ ಶೇ.70 ಧೂಮಪಾನಿಗಳಾಗಿರುತ್ತಾರೆ. ಶೇ.20ರಿಂದ ಶೇ.30 ಮಂದಿ ಪರೋಕ್ಷ ಧೂಮಪಾನಿಗಳಿರುತ್ತಾರೆ.
ವಾಯುಮಾಲಿನ್ಯವೂ ಕಾರಣ:
ಶ್ವಾಸಕೋಶಕ್ಕೆ ಸಂಬಂಧಿಸಿದ ಎಲ್ಲ ಕಾಯಿಲೆಗಳಿಗೆ ಧೂಮಪಾನದ ಜತೆಗೆ ಹೆಚ್ಚುತ್ತಿರುವ ವಾಯುಮಾಲಿನ್ಯವೂ ಕಾರಣವಾಗಿದೆ. ಹಾಗಾಗಿ ಮಧ್ಯವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಮಾದರಿಯ ಕ್ಯಾನ್ಯರ್ ಎದುರಿಸುತ್ತಿದ್ದಾರೆ. ವ್ಯಕ್ತಿಗೆ ಕ್ಯಾನ್ಸರ್ ಯಾವ ಹಂತದಲ್ಲಿದೆ? ಎಂಬ ಆಧಾರದ ಮೇಲೆ ಚಿಕಿತ್ಸೆ ನಿರ್ಧರಿಸಲಾಗುತ್ತದೆ. ಪ್ರಾಥಮಿಕ ಹಂತದಲ್ಲಾದರೆ ಶ್ವಾಸಕೋಶದ ಬಾಧಿತ ಭಾಗವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕಲಾಗುತ್ತದೆ. ಕೀಮೋಥೆರಪಿ, ರೇಡಿಯೇಷನ್ ಚಿಕಿತ್ಸೆ ಕೂಡ ಪ್ರಕರಣಗಳನ್ನು ಆಧರಿಸಿ ನೀಡಲಾಗುತ್ತದೆ ಎನ್ನುತ್ತಾರೆ ತಜ್ಞರು.
ರೋಗ ಲಕ್ಷಣಗಳು
ಮೂರು ವಾರಗಳಿಗೂ ಹೆಚ್ಚು ಕಾಲ ನಿರಂತರ ಕೆಮ್ಮು, ಎದೆನೋವು, ಕೆಮ್ಮಿದಾಗ ರಕ್ತ ಹೊರಹೊಮ್ಮುವಿಕೆ, ಉಸಿರಾಟದ ಸಮಸ್ಯೆ, ತೂಕ ಕಡಿಮೆ ಆಗುವುದು, ನಡೆದಾಡುವಾಗ ಸಮತೋಲನ ಕಳೆದುಕೊಳ್ಳುವುದು ಶ್ವಾಸಕೋಶ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳು. ಇಂತಹವರು ನಿರ್ಲಕ್ಷ್ಯ ಮಾಡದೆ ಕೂಡಲೇ ಆಸ್ಪತ್ರೆಗೆ ತೆರಳಿ, ತಪಾಸಣೆಗೆ ಒಳಪಡಬೇಕು. ಆರಂಭಿಕ ಹಂತದಲ್ಲೇ ರೋಗ ಪತ್ತೆ ಮಾಡಿದರೆ ಸೂಕ್ತ ಚಿಕಿತ್ಸೆಯಿಂದ ನಿಯಂತ್ರಿಸಬಹುದಾಗಿದೆ.
ಚಿಕಿತ್ಸೆ ಹಂತಗಳು:
ಪ್ರಾಥಮಿಕ ಹಂತದಲ್ಲಿ ರೋಗ ಪತ್ತೆಗೆ ಹಲವಾರು ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಇವುಗಳಲ್ಲಿ ಬಯಾಪ್ಸಿ ಪ್ರಮುಖ ಪಾತ್ರ ವಹಿಸುತ್ತದೆ. ರೋಗ ಪತ್ತೆಯಾದ ಬಳಿಕ ಮೊದಲ ಮತ್ತು ಎರಡನೇ ಹಂತದಲ್ಲಿದ್ದರೆ ಶಸಚಿಕಿತ್ಸೆ ನಡೆಸಿ ಕ್ಯಾನ್ಸರ್ ಗಡ್ಡೆಯನ್ನು ಸಂಪೂರ್ಣ ತೆಗೆದು, ಕೀಮೋಥೆರಪಿ ಮತ್ತು ರೇಡಿಯೇಷನ್ ಚಿಕಿತ್ಸೆ ನೀಡಲಾಗುತ್ತದೆ. ಮೂರು ಮತ್ತು ನಾಲ್ಕನೇ ಹಂತದಲ್ಲಿ ಪತ್ತೆಯಾದರೆ ಗಂಭೀರತೆ ಆಧರಿಸಿ ಚಿಕಿತ್ಸೆ ಒದಗಿಸಲಾಗುತ್ತದೆ. ಅಂದರೆ ಇವರಿಗೆ ಪ್ಯಾಲಿಯೇಟಿವ್ ಕೇರ್‌ನ ಅಗತ್ಯ ಇರುತ್ತದೆ. ಇಲ್ಲಿ ನೋವು ನಿವಾರಕ ಇನ್‌ಜೆಕ್ಷನ್ ಮತ್ತು ಮಾತ್ರೆಗಳನ್ನು ನೀಡಲಾಗುತ್ತದೆ. 5ನೇ ಹಂತವನ್ನು ಸಾವು ಎಂದು ಪರಿಗಣಿಸಲಾಗುತ್ತದೆ.
ಜೀವನಶೈಲಿ-ಆಹಾರ ಕ್ರಮ
ಬದಲಾದ ಜೀವನಶೈಲಿ ಹಾಗೂ ಆಹಾರ ಕ್ರಮವೂ ಕ್ಯಾನ್ಸರ್ ಕಾರಣಗಳಲ್ಲಿ ಒಂದು. ನಿತ್ಯ ನಡಿಗೆ, ವ್ಯಾಯಾಮ, ಯೋಗದಂತಹ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು. ಇದಲ್ಲದೆ ಹೊರಗಿನ ಆಹಾರ ಹಾಗೂ ಸಂಸ್ಕರಿಸಿದ ಆಹಾರ ಸೇವನೆ ಬದಲಾಗಿ ಮನೆಯಲ್ಲಿ ತಯಾರಿಸಿದ ಉತ್ತಮ ಪೌಷ್ಟಿಕಾಂಶವುಳ್ಳ ಆಹಾರ ಸೇವಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಬಳಕೆ ಹೆಚ್ಚಾಗಿರುವುದರಿಂದ ಹಣ್ಣುಗಳನ್ನು ಚೆನ್ನಾಗಿ ತೊಳೆದು ಹಾಗೂ ತರಕಾರಿಯನ್ನು ಬೇಯಿಸಿ ಸೇವಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.
ಕೋಟ್
ಕ್ಯಾನ್ಸರ್ ಆರಂಭದಲ್ಲೇ ಪತ್ತೆ ಹೆಚ್ಚಿ ಚಿಕಿತ್ಸೆ ಪಡೆದಲ್ಲಿ ಕಾಯಿಲೆ ನಿಯಂತ್ರಿಸಬಹುದು. ರೋಗ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡದೆ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ರೋಗಿಯ ಜೀವಿತಾವಧಿ ಹೆಚ್ಚಿಸುವ ಬಹಳಷ್ಟು ಔಷಧಗಳು ಲಭ್ಯವಿದ್ದು, ಜನರು ಧೂಮಪಾನ ತ್ಯಜಿಸಿ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಕ್ಯಾನ್ಸರ್ ಅರಿವು ಹೊಂದಬೇಕು.
ಡಾ.ಟಿ.ನವೀನ್, ನಿರ್ದೇಶಕ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ