

ವಿಜಯವಾಣಿ ಸುದ್ದಿಜಾಲ ಉಡುಪಿ
ಕೋಪ, ಚಿಂತೆ, ದ್ವೇಷಕ್ಕಾಗಿ ಸಮಯ ವ್ಯರ್ಥ ಮಾಡಬಾರದು. ನಮ್ಮೆಲ್ಲರ ಜೀವನ ಚಿಕ್ಕದಾಗಿದ್ದು, ನಗುತ್ತ ಆನಂದದಿಂದ ಬದುಕಬೇಕು. ಹಾಸ್ಯ ಅಥವಾ ನಗುವಿಲ್ಲದ ಮಾನವನ ಬಾಳು ಬರಿ ಗೋಳು. ಅಂಥವರ ಜೀವನವೇ ವ್ಯರ್ಥ ಎಂದು ಸಮಾನ ಮನಸ್ಕ ಕನ್ನಡಿಗರ ವೇದಿಕೆಯ ಅಧ್ಯಕ್ಷ ಶ್ರೀನಿವಾಸ ರಾವ್ ಕೆ. ಅಭಿಮತ ವ್ಯಕ್ತಪಡಿಸಿದರು.
ಉಡುಪಿಯ ಕಾತ್ಯಾಯಿನಿ ನಗರದಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ವಿಶ್ವ ನಗು ದಿನದ ನಿಮಿತ್ತ ಮೇ 4ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಹಾಸ್ಯಪ್ರಜ್ಞೆಯುಳ್ಳ ನಗು ಮುಖದವರು ಸುಖ-ದುಃಖಗಳನ್ನು ಸಮನಾಗಿ ಕಂಡು ಸಂತಸದಿಂದ ಜೀವನ ಕಳೆಯುತ್ತಾರೆ ಎಂದರು.
ವೇದಿಕೆಯ ಸದಸ್ಯೆ ಗುಣವತಿ ಮಾತನಾಡಿ, ಮನುಷ್ಯನನ್ನು ರೋಗದಿಂದ ದೂರವಿಡುವ ಶಕ್ತಿ ನಗುವಿಗಿದೆ. ಹೀಗಾಗಿ ನಗು ಎನ್ನುವುದು ಬದುಕಿನ ಭಾಗವಾಗಬೇಕು. ಆದರೆ, ತಾಂತ್ರಿಕ ಯುಗದಲ್ಲಿ ಕೆಲಸದ ಒತ್ತಡದಿಂದಾಗಿ ನಗು ಕಾಣದಾಗಿದೆ. ನಿತ್ಯ ಅರ್ಧ ಗಂಟೆಯಾದರೂ ಹಾಸ್ಯ-ನಗುವಿಗಾಗಿ ಸಮಯ ಮೀಸಲಿಟ್ಟು ನೆಮ್ಮದಿಯ ಜೀವನ ನಡೆಸುವ ಅಗತ್ಯತೆ ಇದೆ ಎಂದರು.
ಸಂಘಟನೆಯ ಪ್ರಮುಖರಾದ ಸುರೇಶ ಡಿ., ಪ್ರೇಮಲತಾ, ಶಿವಾನಿ, ಶ್ರೀದೇವಿ, ಚಂದ್ರಶೇಖರ, ರಾಘವೇಂದ್ರ, ರಮೇಶ, ಅನಂತ, ವಾಸು ಪಿ., ಐಶ್ವರ್ಯಾ, ಉಮೇಶ ಎಂ., ರಾಮಕೃಷ್ಣ, ರಮಾನಂದ, ಜಗದೀಶ, ಶಶಿಕಲಾ, ಸುಮಲತಾ, ದೀಕ್ಷಾ, ಶಿವಲೀಲಾ ಇತರರಿದ್ದರು.