ಮುನ್ನೆಚ್ಚರಿಕೆ ವಹಿಸಿ ಕಿಡ್ನಿ ಕಾಪಾಡಿಕೊಳ್ಳಿ

Kidny Day
Published on

ವಿಜಯಪುರ: ಮಾನಸಿಕ ಒತ್ತಡ ಹಾಗೂ ಅಸಮತೋಲಿತ ಆಹಾರ ಪದ್ಧತಿ ಸಕ್ಕರೆ ಕಾಯಿಲೆ, ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಇವುಗಳಿಂದ ಕಿಡ್ನಿ ವೈಫಲ್ಯ ಕಾಣುವುದುಂಟು ಎಂದು ಡಾ. ರವೀಂದ್ರ ಮದ್ರಕಿ ಹೇಳಿದರು.
ವಿಶ್ವ ಕಿಡ್ನಿ ದಿನಾಚರಣೆ ನಿಮಿತ್ತ ವಿಜಯಪುರದ ಸೊಲ್ಲಾಪುರ ರಸ್ತೆಯಲ್ಲಿರುವ ಕೆಎಚ್‌ಬಿ ಕಾಂಪ್ಲೆಕ್ಸ್‌ನಲ್ಲಿರುವ ಯಶೋದಾ ಮಲ್ಟಿ ಸ್ಷೇಷಾಲಿಟಿ ಆಸ್ಪತ್ರೆಯಲ್ಲಿ ಯಶೋದಾ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಸ್ಪತ್ರೆ ಹಾಗೂ ವಿಜಯವಾಣಿ - ದಿಗ್ವಿಜಯ ಸುದ್ದಿವಾಹಿನಿ ಮಾಧ್ಯಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕಿಡ್ನಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನುಷ್ಯ ಜೀವಿತಾವಧಿಯಲ್ಲೇ ಮತ್ತೊಬ್ಬರಿಗೆ ದಾನಮಾಡಬಹುದಾದ ಏಕೈಕ ಅಂಗ ಕಿಡ್ನಿ. ಕಿಡ್ನಿ ವೈಫಲ್ಯದಿಂದ ಬಳಲುವ ಹಾಗೂ ಬಳಲುವವರ ಕುಟುಂಬದವರಿಗೆ ಮಾತ್ರ ಕಿಡ್ನಿ ಮಹತ್ವ ಗೊತ್ತಾಗುತ್ತದೆ. ಕಿಡ್ನಿ ದೇಹದ ಮಹತ್ವದ ಅಂಗಗಳಲ್ಲಿ ಒಂದು. ಕ್ಯಾನ್ಸರ್ ಹಾಗೂ ಹೃದಯಾಘಾತಕ್ಕಿಂತ ಕಿಡ್ನಿ ವೈಫಲ್ಯ ಅಪಾಯಕಾರಿ ರೋಗವಾಗಿವೆ. ಕಿಡ್ನಿ ವೈಫಲಗೊಂಡಾಗ ಅದರ ರಕ್ಷಣೆಗೆ ತಡಕಾಡದೇ, ವೈಫಲ್ಯಗೊಳ್ಳುವ ಮುನ್ನ ಅವುಗಳ ರಕ್ಷಣೋಪಾಯಗಳನ್ನು ಅನುಸರಿಸುವುದು ಸೂಕ್ತ ಎಂದು ಹೇಳಿದರು.

ಉದ್ಯಮಿ, ಕಾಂಗ್ರೆಸ್ ಮುಖಂಡ ಸಂಗಮೇಶ ಬಬಲೇಶ್ವರ ಮಾತನಾಡಿ, ಭಗವಂತ ಎಲ್ಲೆಡೆ ಇರಲಾಗದೇ ತಾಯಿ ಹಾಗೂ ವೈದ್ಯರನ್ನು ಸೃಷ್ಟಿಸಿದ್ದಾನೆ. ಇಂದಿನ ಧನದಾಹಿ ಲೋಕದಲ್ಲಿ ಮಾತೃ ಹೃದಯಿ ವೈದ್ಯರು ಸಿಕ್ಕುವುದೇ ದುರ್ಲಭವಾಗಿದೆ. ಆದರೆ, ಡಾ. ಮದ್ರಕಿ ಅವರು ರೋಗಿಗಳ ಬಗೆಗಿನ ಕಕ್ಕುಲಾತಿ ಶ್ಲಾಘನಾರ್ಹ. ಅದೆಷ್ಟೋ ಕಿಡ್ನಿ ವೈಫಲ್ಯದಿಂದ ಬಳಲುವ ರೋಗಿಗಳನ್ನು ಗುಣಪಡಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಡಾ. ಪ್ರದೀಪ ಪಾಟೀಲ ಮಾತನಾಡಿ, ಸಾಮಾನ್ಯವಾಗಿ ಕಿಡ್ನಿ ರೋಗಗಳಲ್ಲಿ ತಾತ್ಕಾಲಿಕ ಹಾಗೂ ದೀರ್ಘಕಾಲಿಕ ವೈಫಲ್ಯಗಳೆಂಬ ಎರಡು ಬಗೆಗಳಿವೆ. ತಾತ್ಕಾಲಿಕ ವೈಫಲ್ಯದಿಂದ ಸಂಪೂರ್ಣ ಗುಣಮುಖರಾಗಬಹುದು. ಆದರೆ, ದೀರ್ಘಕಾಲಿಕ ವೈಫಲ್ಯಕ್ಕೆ ಡಯಾಲಿಸಿಸ್ ಅಥವಾ ಕಿಡ್ನಿ ಕಸಿಕರಣವೇ ಪರಿಹಾರ ಎಂದು ಹೇಳಿದರು.

ಡಾ. ಬಸವರಾಜ ಸಜ್ಜನ ಮಾತನಾಡಿ, ಕಿಡ್ನಿ ವೈಫಲ್ಯಕ್ಕೂ ಮುನ್ನ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸುವುದು ಸೂಕ್ತ ಎಂದು ಹೇಳಿದರು.
ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ನರೇಶಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಇಂದಿನ ಶಿಕ್ಷಣ ಪದ್ಧತಿ ವಿದ್ಯಾರ್ಥಿಗಳಲ್ಲಿ ದೇಹದ ರಚನೆ, ಅವುಗಳ ಕಾರ್ಯಕ್ರಮ ಹಾಗೂ ರಕ್ಷಣೆ ಬಗ್ಗೆ ತಿಳಿಸುವ ಕಾರ್ಯ ಮಾಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ವಿವಿಧ ಕಾಯಿಲೆಗಳ ಬಗ್ಗೆ ತಿಳಿವಳಿಕೆ ನೀಡಬೇಕೆಂದು ಮನವಿ ಮಾಡಿದರು.
ಡಾ. ಕಮಲಾ ಮದ್ರಕಿ, ಡಾ. ವಿವೇಕಾನಂದ ಕಟ್ಟಿ, ಡಾ. ಬಸವರಾಜ ಉಗ್ರಾಣ, ಡಾ. ದೀಪಕ ಚಿಣಗಿ, ಯಶೋದಾ ಟ್ರಸ್ಟ್ ಸಿಬ್ಬಂದಿ ಹಾಗೂ ವಿವಿಧ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಮಹಾತ್ಮ ಗಾಂಧಿ ವೃತ್ತದಿಂದ ಯಶೋದಾ ಆಸ್ಪತ್ರೆವರೆಗೆ ಹಮ್ಮಿಕೊಂಡಿದ್ದ ಜಾಥಾದಲ್ಲಿ ಯಶೋದಾ ಟ್ರಸ್ಟ್ ಸಿಬ್ಬಂದಿ ಹಾಗೂ ವಿವಿಧ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡು ಜನಜಾಗೃತಿ ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net