

ಮಂಡ್ಯ: ಪ್ರಾಚೀನ ಕಾಲದಲ್ಲಿ ಸಮರ ಕಲೆಯಾಗಿದ್ದ ಕರಾಟೆ ಇಂದು ಆತ್ಮರಕ್ಷಣೆಯ ಅಸ್ತ್ರವಾಗಿದೆ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿದರು.
ನಗರದ ಬಾಲಭವನದಲ್ಲಿ ವಿಷ್ಣು ಲಯನ್ಸ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್, ಗೋಜು ರಿಯೋ ಕರಾಟೆ ಡೊ ಅಕಾಡೆಮಿ ಇಂಡಿಯಾ ಸಹಯೋಗದಲ್ಲಿ ವಿಶ್ವ ಕರಾಟೆ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕರಾಟೆ ಪ್ರದರ್ಶನ ಹಾಗೂ ಕರಾಟೆ ಕಲೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಕಾಲಘಟ್ಟದಲ್ಲಿ ಕರಾಟೆ ವಿಶ್ವದಲ್ಲಿಯೇ ಜನಪ್ರಿಯಗೊಂಡಿದೆ. ಯಾರೊಬ್ಬರೂ ನೋವು ಅಥವಾ ಆಕ್ರಮಣವನ್ನು ಅನುಭವಿಸದಂತೆ ಒಬ್ಬರ ಸ್ವಂತ ದೇಹವನ್ನು ಕಲ್ಲಿನಂತೆ ಬಲಪಡಿಸುವುದು ಇದರ ಮುಖ್ಯ ಗುರಿಯಾಗಿದೆ. ಗುದ್ದುವುದು, ಒದೆಯುವುದು, ಮೊಣಕೈಯಲ್ಲಿ ಹೊಡೆಯುವುದು ಮತ್ತು ಮೊಣಕಾಲಿನ ಮೇಲೆ ಹೊಡೆಯುವುದು ಇದರ ಮುಖ್ಯ ತಂತ್ರಗಳು. ಕರಾಟೆ ಕಲಿಕೆಗೆ ತರಬೇತಿ ಅತ್ಯಗತ್ಯ ಎಂದು ನುಡಿದರು.
ಕರಾಟೆಯನ್ನು ಜಪಾನ್‌ನ ಓಕಿನಾವಾದಲ್ಲಿ ಕಂಡುಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಎರಡು ಪದಗಳಿಂದ ಜೋಡಿಸಲ್ಪಟ್ಟು ’ಕಾರ’ ಎಂದರೆ ’ಖಾಲಿ’ ಮತ್ತು ’ತೆ’ ಎಂದರೆ ’ಕೈ’, ಅಂದರೆ ’ಖಾಲಿ ಕೈ’. ಇದರ ಮುಂದೆ ಜಪಾನಿನ ಜನರು ’ಮಾಡು’ ಎಂಬ ಪದವನ್ನು ಸೇರಿಸಿದ್ದಾರೆ. ನಂತರ ಅದು ’ಕರಾಟೆ-ಡು’ ಆಗಿದೆ. ಕರಾಟೆ ಅಂದರೆ ’ಸಂಪೂರ್ಣ ಜೀವನ ವಿಧಾನ’ ಎಂಬರ್ಥವನ್ನು ನೀಡುತ್ತದೆ ಎಂದು ವಿವರಿಸಿದರು.
ಕರಾಟೆ ತರಬೇತುದಾರ ಲೋಕೇಶ್ ಮೊದಲಿಯಾರ್ ಮಾತನಾಡಿ, ಆ.6ರಂದು ಸಿದ್ದಾರ್ಥ ಬಡಾವಣೆಯಲ್ಲಿರುವ ಎಂಒಬಿ ಸಮುದಾಯ ಭವನದಲ್ಲಿ 6ನೇ ವರ್ಷದ ರಾಜ್ಯಮಟ್ಟದ ಮುಕ್ತ ಕರಾಟೆ ಪಂದ್ಯಾವಳಿ ಆಯೋಜಿಸಲಾಗಿದೆ. ಕರಾಟೆ, ಕುಂಗ್ ಫೂ ಮತ್ತು ಟೇಕ್ವಾಂಡೋ ನಡುವಿನ ವ್ಯತ್ಯಾಸಗಳು, ತಂತ್ರಗಾರಿಕೆಯ ಕೌಶಲತೆ ಬಹಳಷ್ಟಿದೆ. ಚಲನಚಿತ್ರಗಳಲ್ಲಿ ಬ್ರೂಸ್ ಲೀಯಿಂದ ಜಾಕಿಚಾನ್‌ವರೆಗೆ ವಿಶ್ವದ ಶ್ರೇಷ್ಠ ನಟ ಮತ್ತು ಸಮರ ಕಲೆಗಳ ಮಾಸ್ಟರ್ ಆಗಿದ್ದಾರೆ. ಅವರು ತಮ್ಮ ಅದ್ಭುತ ಕೌಶಲದಿಂದ ಜಗತ್ತಿನಲ್ಲಿ ತಮ್ಮ ಹೆಸರನ್ನು ಬೆಳಗಿಸಿದ್ದಾರೆ. ಸಮರ ಕಲೆಯಲ್ಲಿ ಪರಿಣಿತರಾದ ವಿದ್ಯುತ್ ಜಮ್ವಾಲ್, ಅಕ್ಷಯ್ಕುಮಾರ್ ಅಥವಾ ಟೈಗರ್ ಶ್ರಾಫ್ ಅವರಂತಹ ಅನೇಕ ನಟರು ಭಾರತದಲ್ಲಿದ್ದಾರೆ ಎಂದು ಹೇಳಿದರು.
ನಿವೃತ್ತ ಸೈನಿಕ ಕ್ಯಾಪ್ಟನ್ ಹರೀಶ್‌ಕುಮಾರ್, ರಾಷ್ಟ್ರ ಯುವಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಸಚಿನ್‌ಕುಮಾರ್, ಗೌತಮ್, ಶರತ್ ಇತರರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕರಾಟೆ ಪ್ರದರ್ಶನ ನೀಡಿದರು.