ಜಗತ್ತು ಭಾರತವನ್ನು ಬೆರಗುಗಣ್ಣಿನಿಂದ ನೋಡುತ್ತಿದೆ: ಇಸ್ರೋದ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್

23
Published on

ಮೈಸೂರು: ಸೀಮಿತ ಸಂಪನ್ಮೂಲದಲ್ಲಿಯೂ ಯಶಸ್ವಿ ಚಂದ್ರಯಾನ ಮಾಡಿ ಸಫಲವಾಗಿರುವುದರಿಂದ ಜಗತ್ತು ಭಾರತವನ್ನು ಬೆರಗುಗಣ್ಣಿನಿಂದ ನೋಡುವಂತಾಗಿದೆ ಎಂದು ಇಸ್ರೋದ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್ ಅಭಿಪ್ರಾಯಪಟ್ಟರು.
ಹಾ.ಮಾ.ನಾಯಕ ಪ್ರತಿಷ್ಠಾನದಿಂದ ಮಾನಸಗಂಗೋತ್ರಿಯ ಭೌತಶಾಸ್ತ್ರ ವಿಭಾಗದಲ್ಲಿ ಬುಧವಾರ ಆಯೋಜಿಸಿದ್ದ ಹಾ.ಮಾ.ನಾಯಕ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಚಂದ್ರ ಸ್ಪರ್ಶ- ಸವಾಲುಗಳು’ ವಿಷಯ ಕುರಿತು ಮಾತನಾಡಿದರು.
ಕಡಿಮೆ ಸಾಮರ್ಥ್ಯದ ರಾಕೆಟ್‌ನಲ್ಲಿಯೂ ಚಂದ್ರಯಾನ ಮಾಡಬಹುದು ಎನ್ನುವ ಸವಾಲನ್ನು ಮೆಟ್ಟಿ ನಿಂತದ್ದೇ ನಮ್ಮ ಸಾಧನೆ. ಇಂತಹ ಯೋಜನೆ ಮಾಡುವುದು ಮತ್ತು ಸಫಲವಾಗುವುದು ಸಾಧ್ಯವೇ ಎಂಬುದೇ ಹೆಚ್ಚಿನ ಕುತೂಹಲ ಮೂಡಿಸಿತ್ತು. ಇದರ ಅನುಭವ ಮತ್ತು ಅನಿವಾರ್ಯತೆ ಹೊಸ ಮಾರ್ಗಗಳಿಗೆ ಪ್ರೇರಕ ಶಕ್ತಿಯಾಗಿದೆ ಎಂದರು.
ಆಳ ಸಮುದ್ರದ ಮೀನುಗಾರಿಕೆಗೆ ತೆರಳುವ ಮೀನುಗಾರರ ಸುರಕ್ಷತೆ ಮತ್ತು ಮೀನುಗಳ ಜಾಡು ಕಂಡುಹಿಡಿಯಲು ನಾವು ಸಿದ್ಧಪಡಿಸಿದ್ದ ಉಪಕರಣ, ನಮ್ಮ ಚಂದ್ರಯಾನಕ್ಕೂ ಸಹಕಾರ ನೀಡಿತು. ಭಾರತದ ಆಲೋಚನೆಯಲ್ಲಿ ಮೌಲ್ಯಗಳಿವೆ. ಜೀವಪರ ವಿಚಾರಗಳಿವೆ ಎಂಬುದನ್ನು ಪ್ರಪಂಚ ಅರಿಯುತ್ತಿದೆ ಎಂದು ಹೇಳಿದರು.
ಚಂದ್ರಯಾನ 2ರಲ್ಲಿ ದೊರೆತ ಅನುಭವ ಮತ್ತು ಮಾಹಿತಿ ನಮ್ಮನ್ನು ತರಬೇತಿಗೊಳಿಸಿದ್ದು, ಚಂದ್ರಯಾನ 3ರ ಸಾಧನೆಗೆ ಸಹಕಾರಿಯಾಯಿತು. ಭೂಮಿ ಸುತ್ತ ತಿರುಗತ್ತಲೇ ರಾಕೆಟ್ ವೇಗವನ್ನು ಹೆಚ್ಚಿಸುವುದು, ಚಂದ್ರನ ಬಳಿ ಸಾಗಿದಾಗ ವೇಗವನ್ನು ಕಡಿಮೆಗೊಳಿಸುವ ಕ್ರಿಯೆ ನಮ್ಮ ಪ್ರಮುಖ ವಿಧಾನವಾಗಿತ್ತು. ಇದು ಹೆಚ್ಚು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾದರೂ ನಮಗೆ ಅನಿವಾರ್ಯವಾಗಿತ್ತು. ಶಕ್ತಿಶಾಲಿ ರಾಕೆಟ್ ಇಲ್ಲದಿದ್ದರಿಂದ ಈ ನಿರ್ಧಾರವೂ ಒಂದು ಸವಾಲಾಗಿತ್ತು ಎಂದು ವಿವರಿಸಿದರು.
ಚಂದ್ರನಲ್ಲಿ ಇಳಿಯಬೇಕಾದ ಸ್ಥಳವನ್ನು ಆಯ್ಕೆ ಮಾಡುವುದು ಮತ್ತೊಂದು ದೊಡ್ಡ ಜವಾಬ್ದಾರಿಯಾಗಿತ್ತು. ಇದಕ್ಕೆ ನಿಗದಿ ಮಾಡಲು ನಾವು ಕಳುಹಿಸಿದ್ದ ಕ್ಯಾಮರಾ ನಮಗೆ ಸಹಕಾರ ನೀಡಿತು. ಚಂದ್ರನಲ್ಲಿ ಇಳಿಯುವಾಗ ನಮ್ಮ ರಾಕೆಟ್ ಪ್ರೊಪೆಲೆಂಟ್ ಕಳಚಿಸುವುದು, ಕೇವಲ ಲ್ಯಾಂಡರ್ ಮೂಲಕ ಹೋಗುವುದು ಸವಾಲಾಗಿತ್ತು. ಲ್ಯಾಂಡರ್‌ನಲ್ಲಿಯೂ ಮುಂದೆ ಸಾಗಲು ಅಗತ್ಯವಾದ ಎಂಜಿನ್ ಅಳವಡಿಸಲಾಗಿತ್ತು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷರೂ ಅದ ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಮಾತನಾಡಿ, ಸಾಹಿತಿಯಾದವರು ತಮ್ಮ ಸಾಹಿತ್ಯ ಪಕ್ವಗೊಳ್ಳಲು ವಿಜ್ಞಾನದ ಬಗ್ಗೆಯೂ ತಿಳಿವಳಿಕೆ ಪಡೆಯುವುದಲ್ಲದೆ, ಕಾಲಕಾಲಕ್ಕೆ ಆಗುವ ಸಂಶೋಧನೆಗಳ ಕುರಿತು ಅರಿವು ಇರಬೇಕು ಎಂದು ಅಭಿಪ್ರಾಯಪಟ್ಟರು.
ಡಾ.ಹಾ.ಮಾ.ನಾಯಕ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲದೆ, ವಿಜ್ಞಾನ ಕ್ಷೇತ್ರದಲ್ಲಿಯೂ ಆಸಕ್ತಿ ಬೆಳೆಸಿಕೊಂಡಿದ್ದರು. ಹೀಗಾಗಿ, ಅವರು ವಿಜ್ಞಾನ ಸಂಘಟನೆಯಲ್ಲಿಯೂ ಉಪಾಧ್ಯಕ್ಷರಾಗಿ ಅನೇಕ ಮಾರ್ಗದರ್ಶನಗಳನ್ನು ನೀಡಿದ್ದರು. ನಾನೇನಾದರೂ ಸಾಹಿತಿ ಆಗದಿದ್ದರೆ ಥಿಯೋಟಿಕಲ್ ಫಿಜಿಕ್ಸ್ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳುತ್ತಿದ್ದೆ. ಅದು ನನಗೆ ಇಷ್ಟದ ವಿಷಯಗಳಲ್ಲಿ ಒಂದಾಗಿದೆ ಎಂದರು.
ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಗತ್ತಿನಲ್ಲಿ ಒಂದಲ್ಲ ಒಂದು ಹೊಸ ಸಂಶೋಧನೆ, ಪ್ರಯೋಗಗಳು ನಿರಂತರವಾಗಿ ನಡೆಯುತ್ತಲೇ ಇವೆ. 25-50 ವರ್ಷಗಳ ಹಿಂದೆ ನಡೆದ ಸಂಶೋಧನೆಯೇ ದೊಡ್ಡದೆಂದು ನಾವು ತಿಳಿದುಕೊಂಡಿದ್ದರೆ ಬಳಿಕ ಇನ್ನಷ್ಟು ಹೊಸ ಪ್ರಯೋಗಗಳು ಅಗಿರುತ್ತವೆ. ಹೊಸದರ ಬಗ್ಗೆ ತಿಳಿದುಕೊಳ್ಳದೆ ಹಳೆಯದೇ ಶ್ರೇಷ್ಠ ಎನ್ನುವ ವಾದವನ್ನು ಮಾಡಲಾಗುತ್ತದೆ. ಆದ್ದರಿಂದ ಹೊಸ ಆವಿಷ್ಕಾರಗಳ ಕುರಿತು ಸಾಹಿತಿಗಳು ಜ್ಞಾನ ಪಡೆದುಕೊಂಡರೆ ಇನ್ನಷ್ಟು ಉತ್ತಮ ಬರಹ ಬರಲು ಸಾಧ್ಯ ಎಂದು ಸಲಹೆ ನೀಡಿದರು.
ಕಾರ್ಯದರ್ಶಿ ಪ್ರೊ.ಪಿ.ವೆಂಕಟರಾಮಯ್ಯ, ಖಜಾಂಚಿ ಕೆ.ಮಹದೇವ್, ಕನ್ನಡ ಅಧ್ಯಯನ ಸಂಸ್ಥೆ ನಿವೃತ್ತ ನಿರ್ದೇಶಕ ಪಂಡಿತಾರಾಧ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net