

ಮೈಸೂರು: ಒಕ್ಕಲಿಗರ ವಿಕಾಸ ವೇದಿಕೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕುಕ್ಕರಳ್ಳಿಕೆರೆ ಆವರಣದಲ್ಲಿ ಶುಕ್ರವಾರ ರಾಷ್ಟ್ರಕವಿ ಕುವೆಂಪು ಜಯಂತಿ ಆಚರಿಸಲಾಯಿತು. ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಕೆರೆ ಏರಿಯಲ್ಲಿ ವಿಶ್ವಮಾನವ ಕಾಲ್ನಡಿಗೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಶ್ರಾಂತ ಕುಲಪತಿ ಪ್ರೊ.ಚಿದಾನಂದಗೌಡ ಮಾತನಾಡಿ, ಕುಕ್ಕರಹಳ್ಳಿ ಕೆರೆಗೆ ಒಂದು ಮಹತ್ವ ಇದ್ದು, ಮೈಸೂರಿನ ಹಲವು ಸಾಹಿತಿಗಳು ಈ ಏರಿಯ ಮೇಲೆ ನಡೆದಾಡಿದ್ದಾರೆ. ಕುಕ್ಕರಳ್ಳಿಕರೆಯಲ್ಲಿ ಮೀನು ಹಿಡಿಯುವ ತೇಜಸ್ವಿ, ಚೈತ್ರಾ ಮತ್ತು ತಾರಿಣಿಯನ್ನು ಕುವೆಂಪು ಹುಡುಕಿ ಬರುತ್ತಾರೆ. ಆಗ ಅಪ್ಪನಿಗೆ ಹೆದರಿ ಹಿಡಿದ ಮೀನನ್ನು ಅಲ್ಲೇ ಬಿಟ್ಟು ಮನೆಗೆ ಹೋದ ಪ್ರಸಂಗ ತಾರಿಣಿ ಪುಸ್ತಕದಲ್ಲಿ ದಾಖಲಿಸಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜ್ ಮಾತನಾಡಿ, ಕುವೆಂಪು ಅವರನ್ನು ನೋಡಿದರೆ ಕನ್ನಡ ಭಾಷೆಯ ಬಗ್ಗೆ ಪ್ರೀತಿ ಹುಟ್ಟುತ್ತದೆ. ಮಾನವತಾವಾದಿ, ರೈತರನ್ನು ನೇಗಿಲಯೋಗಿ ಎಂದು ಕರೆದು ಅನ್ನದಾತನನ್ನು ದೇವರ ರೂಪದಲ್ಲಿ ಇಟ್ಟರು ಎಂದು ಬಣ್ಣಿಸಿದರು.
ವಿದ್ಯಾರ್ಥಿಗಳಿಗೆ ಜ್ಞಾನ ತುಂಬೇಕು. ಭತ್ತ ತುಂಬುವ ಚೀಲಗಳಾಗಬಾರದು, ಭತ್ತ ಬೆಳೆಯುವ ಗದ್ದೆಗಳಾಗಬೇಕು ಎನ್ನುವ ಮೂಲಕ ಯುವ ಜನತೆಗೆ ದೂರದೃಷ್ಟಿಕೋನ ಇರಬೇಕು ಎಂದು ತಿಳಿಸಿದ್ದರು.
ರಂಗಾಯಣದ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ ಮಾತನಾಡಿ, ವೈಚಾರಿಕತೆಯನ್ನು ಮೈಗೂಡಿಸಿಕೊಂಡಿದ್ದ ಕುವೆಂಪು ಅವರ ವಿಶ್ವಮಾನವ ಸಂದೇಶ ಎಲ್ಲ ಕಾಲಕ್ಕೂ ಸಲ್ಲುವಂತದ್ದು. ಕನ್ನಡದ ಸಾಹಿತ್ಯ ಎಂದರೆ ಪಂಪನಿಂದ ಕುವೆಂಪು ವರೆಗೆ ನೋಡುವಂತಹ ಅಪ್ರತಿಮ ಸಾಹಿತ್ಯವನ್ನು ನೀಡಿದ ಸಂತ ಕವಿ ಎಂದು ಬಣ್ಣಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಕುವೆಂಪು ಅವರು ನಡೆದಾಡಿದ ಕುಕ್ಕರಹಳ್ಳಿ ಕೆರೆ ಯುವಕರಿಗೆ ಮಾದರಿ. ಕುಕ್ಕರಹಳ್ಳಿ ಕೆರೆ ಸುತ್ತಮುತ್ತ ಅಭಿವೃದ್ಧಿ ಆಗಬೇಕು. ಅವರ ಎಲ್ಲ ಸಾಹಿತ್ಯ ಆಂಗ್ಲಭಾಷೆಗೆ ತರ್ಜುಮೆ ಆಗಿದ್ದರೆ ಹತ್ತಕ್ಕಿಂತ ಹೆಚ್ಚು ನೊಬಲ್ ಪ್ರಶಸ್ತಿ ಬರುತ್ತಿತ್ತು. ಕುವೆಂಪು ಅವರ ಪಂಚ ಮಂತ್ರಗಳು ಸಪ್ತಸೂತ್ರಗಳು ವಿಶ್ವಮಟ್ಟದಲ್ಲಿ ಪ್ರಚಾರವಾಗಬೇಕು ಎಂದರು.
ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ.ರಾಮು, ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಎಚ್.ಎಲ್.ಯಮುನಾ, ಸಾಮಾಜಿಕ ಹೋರಾಟಗಾರ ಅರವಿಂದ್ ಶರ್ಮ, ಮುಖಂಡರಾದ ಸುಶೀಲಾ, ಸೋಸಲೆ ಸಿದ್ದರಾಜು, ದ್ಯಾವಪ್ಪ ನಾಯಕ, ಎಸ್. ನಾಗರಾಜ, ಕೆ.ಎಸ್.ನಾಗರಾಜ್ ಇತರರು ಇದ್ದರು. ಅಮ್ಮ ರಾಮಚಂದ್ರ ಮತ್ತು ತಂಡದಿಂದ ನಾಡಗೀತೆ ಹಾಗೂ ರೈತ ಗೀತೆ ಪ್ರಸ್ತುತ ಪಡಿಸಲಾಯಿತು.