ರಾಷ್ಟ್ರಕವಿ, ಅಮರಶಿಲ್ಪಿ ಕೊಡುಗೆಗಳು ಅಪಾರ

jakanachari
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ರಾಷ್ಟ್ರಕವಿ ಕುವೆಂಪು ಸಾಹಿತ್ಯ ಕ್ಷೇತ್ರದಲ್ಲಿ ಸಮಾಜಕ್ಕೆ ಕೊಡುಗೆ ನೀಡಿದರೆ ಅಮರ ಶಿಲ್ಪಿ ಜಕಣಾಚಾರಿ ಅವರು ವಾಸ್ತು ಶಿಲ್ಪದ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ, ಅವರ ಆಚಾರ, ವಿಚಾರ, ಕಲೆ, ಕಾಯಕ ನಿಷ್ಠೆಯನ್ನು ಅರಿತು ಅವರ ಮಾರ್ಗದರ್ಶನದಲ್ಲಿ ನಡೆಯೋಣ ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಹೇಳಿದರು.

ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಮತ್ತು ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಅಂಗವಾಗಿ ರಾಷ್ಟ್ರ ಕವಿ ಕುವೆಂಪು ಹಾಗೂ ಅಮರ ಶಿಲ್ಪಿ ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ರಾಷ್ಟ್ರ ಕವಿ ಕುವೆಂಪು ಜ್ಞಾನಪೀಠ ಪ್ರಶಸ್ತಿ, ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿ ಇನ್ನೂ ಹಲವು ಪ್ರಶಸ್ತಿ ಹಾಗೂ ಸ್ಥಾನಮಾನಗಳಿಗೆ ಭಾಜನರಾದವರು. ಕುವೆಂಪು ಅವರ ಸಾಹಿತ್ಯ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ ರಾಷ್ಟ್ರದಾದ್ಯಂತ ಸಾಹಿತ್ಯ ಪಸರಿಸಿದೆ ಎಂದು ಸ್ಮರಿಸಿದರು. ಕನ್ನಡ ಸಾಹಿತ್ಯಕ್ಕೆ, ಸಮಾಜ ಸುಧಾರಣೆಗೆ, ಜಾತ್ಯತೀತ ವ್ಯವಸ್ಥೆಗೆ ಅವರ ಕೊಡುಗೆ ಅಪಾರವಾದದ್ದು. ಇಡೀ ಜಗತ್ತಿಗೆ ವಿಶ್ವ ಮಾನವ ಸಂದೇಶ ಸಾರಿದ ರಾಷ್ಟ್ರಕವಿಅವರ ಸಾಹಿತ್ಯದ ಪರಿಕಲ್ಪನೆಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಕಲಾಕೃತಿಗಳೇ ಸೌಭಾಗ್ಯ: ವಾಸ್ತು ಶಿಲ್ಪದ ಹರಿಕಾರ ಜಗತ್ತಿನ ಅದ್ಭುತ ಶಿಲ್ಪಿಗಳ ಸಾಲಿನಲ್ಲಿ ನಿಲ್ಲುವ ಜಕಣಾಚಾರಿ ಅವರು ಬೇಲೂರು ಮತ್ತು ಹಳೆಬೀಡು ಸೇರಿ ಇತರ ಸ್ಥಳಗಳಲ್ಲಿ ಕಲ್ಲಿನಲ್ಲಿ ಕೆತ್ತಿದ ಕಲಾಕೃತಿಗಳನ್ನು ನೋಡುವುದೇ ಒಂದು ಸೌಭಾಗ್ಯ ಎಂದು ಜಿಲ್ಲಾಧಿಕಾರಿ ಹೇಳಿದರು. ಅವರ ವಾಸ್ತು ಶಿಲ್ಪ ಕಲೆಯು ಈಗಲು ಪ್ರಸ್ತುತವಾಗಿದೆ, ಅವರ ವಾಸ್ತು ಶಿಲ್ಪ ಕೆತ್ತನೆಗಳನ್ನು ಈಗಲೂ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ನಮ್ಮೊಳಗಿನ ಕಲೆಯನ್ನು ನಾವು ಗುರುತಿಸಿದರೆ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂಬ ತತ್ವ ಸಾರಿದರು. ಅವರ ಗುಣ ಮತ್ತು ಬೆಳೆದು ಬಂದ ಪರಿಶ್ರಮದ ಘಟನೆಗಳನ್ನು ತಿಳಿದು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದರು.

ಕನ್ನಡ ಮಹತ್ವ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್. ಕೃಷ್ಣಪ್ಪ ಮಾತನಾಡಿ, ಕುವೆಂಪು ಎಲ್ಲರಿಗೂ ಚಿರಪರಿಚಿತರು, ಪ್ರತಿನಿತ್ಯ ಶಾಲಾ ಕಾಲೇಜುಗಳಲ್ಲಿ ಹಾಡುವ ಜೈ ಭಾರತ ಜನನಿಯ ತನುಜಾತೆ ನಾಡಗೀತೆಯಲ್ಲಿ ಅವರು ಎಷ್ಟರ ಮಟ್ಟಿಗೆ ಪರಿಸರವನ್ನು ಪ್ರೀತಿಸುತ್ತಿದ್ದರು ಎಂದು ನಾವು ಕಾಣಬಹುದು ಎಂದರು. ಅದೇ ರೀತಿ ರೈತ ದೇಶದ ಬೆನ್ನೆಲುಬು ಅಂತ ಹೇಳಿ ರೈತರಿಗೋಸ್ಕರ ಒಂದು ಹಾಡನ್ನು ಬರೆದರು. ನನ್ನ ಕನ್ನಡ ಭಾಷೆಯ ಮಹತ್ವವನ್ನು ಎಲ್ಲೆಡೆ ಸಾರಿದ ಮಹಾನ್ ವ್ಯಕ್ತಿಯಾಗಿದ್ದರು. ಬಹುಮುಖ್ಯವಾಗಿ ಕಥೆ ಕಾದಂಬರಿ, ನಾಟಕ, ಕವನಗಳ ಮೂಲಕ ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ನಮಗೆ ಉಣಬಡಿಸಿದವರು. ಎಲ್ಲದಕ್ಕಿಂತ ಹೆಚ್ಚಾಗಿ ಅವರು ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿದವರು ಎಂದು ಗುಣಗಾನ ಮಾಡಿದರು. ವಾಸ್ತು ಶಿಲ್ಪ ಮತ್ತು ವಿಗ್ರಹ ಕೆತ್ತನೆಯಲ್ಲಿ ಚಿರಪರಿಚಿತರಾದ ಅಮರ ಶಿಲ್ಪಿ ಜಕಣಾಚಾರಿ ಬೇಲೂರು ಚನ್ನಕೇಶವ, ಹಳೇಬೀಡು, ಸೋಮನಾಥೇಶ್ವರ ದೇವಾಲಾಯಗಳ ವಾಸ್ತು ಶಿಲ್ಪ ಕಲೆಯು ವಿಶ್ವ ಪಾರಂಪರಿಕ ತಾಣಗಳಲ್ಲಿ ಗುರುತಿಸಲಾಗಿದೆ. ಅವರ ಕಲೆಗೆ ಬೆಲೆ ಕಟ್ಟಲಾಗದು. ವಾಸ್ತು ಶಿಲ್ಪ ಕಲೆಗೆ ಅವರ ಕೊಡುಗೆ ಅಸಾಮಾನ್ಯ ವಾದುದು ಎಂದರು. ಕಾರ್ಯಕ್ರಮದಲ್ಲಿ ರಂಗ ಕಹಳೆ ಕಲಾ ತಂಡದಿಂದ ’ಕುವೆಂಪು’ ಅವರ ಬೊಮ್ಮನಹಳ್ಳಿ ಕಿಂದರ ಜೋಗಿ ನಾಟಕ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net