

ಮಂಡ್ಯ: ವಿಶ್ವ ಹಿಂದು ಪರಿಷತ್, ಬಜರಂಗದಳ-ದುರ್ಗಾವಾಹಿನಿ ಮತ್ತು ಶ್ರೀರಾಮಾಂಜನೇಯ ಮಹೋತ್ಸವ ಸಮಿತಿ ಸಹಯೋಗದಲ್ಲಿ ಏ.12ರಂದು ಹನುಮ ಜಯಂತಿಯ ಅಂಗವಾಗಿ ನಗರದಲ್ಲಿ ಡಿಜೆ ಸಮೇತ ಶೋಭಯಾತ್ರೆ ಆಯೋಜಿಸಲಾಗಿದೆ ಎಂದು ವಿಎಚ್‌ಪಿ ಸಹಕಾರ್ಯದರ್ಶಿ ಚಿಕ್ಕಬಳ್ಳಿ ಬಾಲು ತಿಳಿಸಿದರು.
ಹಿಂದು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ, ಹಿಂದು ಧಾರ್ಮಿಕ ಆಚರಣೆಗಳ ವೇಳೆ ಅಹಿತಕರ ಘಟನೆಗಳನ್ನು ನಡೆಸಿ ನಾವು ದುರ್ಬಲರು ಎಂಬುದನ್ನು ತೋರುವುದರ ವಿರುದ್ದ, ಸಾರ್ವಜನಿಕ ಆಸ್ತಿಗಳನ್ನು ವಕ್ಫ್‌ಗೆ ವರ್ಗಾಯಿಸಿ ಅನ್ಯಾಯ ಎಸಗುವುದರ ವಿರುದ್ದ ಜಾಗೃತಿ ಮೂಡಿಸಲು ಶೋಭಯಾತ್ರೆ ನಡೆಸಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಂದು ಮಧ್ಯಾಹ್ನ 12 ಗಂಟೆಗೆ ಕಾಳಿಕಾಂಭ ದೇವಾಲಯದ ಬಳಿ ಪ್ರಾರಂಭವಾಗುವ ಶೋಭಯಾತ್ರೆ ಪೇಟೆಬೀದಿ ಮೂಲಕ ಹೊಳಲು ವೃತ್ತ, ಜಯಚಾಮರಾಜೇಂದ್ರ ಒಡೆಯರ್ ವೃತ್ತ, ಮಹಾವೀರ ವೃತ್ತ, ಹೊಸಹಳ್ಳಿ ವೃತ್ತ, ಕನ್ನಿಕಾ ಪರಮೇಶ್ವರಿ ವಾಟರ್ ಟ್ಯಾಂಕ್, ಕುರುಬರ ಹಾಸ್ಟೆಲ್ ವೃತ್ತದ ಮಾರ್ಗವಾಗಿ ಮಂಡ್ಯ ವಿಶ್ವವಿದ್ಯಾಲಯ ಮೈದಾನ ತಲುಪಲಿದೆ ಎಂದರು.
ವಿವಿ ಆವರಣದಲ್ಲಿ ಆಯೋಜಿಸಿರುವ ಸಮಾವೇಶದ ಸಾನಿಧ್ಯವನ್ನು ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಮತ್ತು ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಭಾನುಪ್ರಕಾಶ್ ಶರ್ಮ ವಹಿಸುವರು. ಚಿಕ್ಕಬಳ್ಳಿ ಬಾಲು ಪ್ರಸ್ತಾವಿಕ ನುಡಿಗಳನ್ನಾಡಲಿದ್ದು, ಯುವ ಬ್ರಿಗೆಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡುವರು. ಧರ್ಮ ಪ್ರಸಾರ ಪ್ರಮುಖ್ ಸೂರ್ಯನಾರಾಯಣ, ವಿಎಚ್‌ಪಿ ಉಪಾಧ್ಯಕ್ಷ ಬಲರಾಮೇಗೌಡ, ಕಾರ್ಯದರ್ಶಿ ರಾಘವೇಂದ್ರ ಕೆ.ಪುಣ್ಯಕೋಟಿ, ಶ್ರೀರಾಮಾಂಜನೇಯ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸಿಪಾಯಿ ಶ್ರೀನಿವಾಸ್, ಬಜರಂಗದಳದ ಸಹಯೋಜಕರಾದ ಬಸವರಾಜು, ಪುನೀತ್, ದುರ್ಗಾವಾಹಿನಿಯ ಸಂಯೋಜಕಿ ಕುಮಾರಿ ರೇಖಾ ಉಪಸ್ಥಿತರಿರಲಿದ್ದಾರೆ ಎಂದು ವಿವರಿಸಿದರು.
ಶೋಭಯಾತ್ರೆ ಹಿನ್ನೆಲೆಯಲ್ಲಿ ಏ.10ರಂದು ಬೈಕ್ ರ‌್ಯಾಲಿ ಮೂಲಕ ನಗರದಲ್ಲಿ ಶೋಭಯಾತ್ರೆಯ ಜಾಗೃತಿ ಮೂಡಿಸಲಾಗುವುದು. ಅಂದಿನ ಶೋಭಯಾತ್ರೆಯಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದು, ಎಲ್ಲ ಪಕ್ಷಗಳ ಜನಪ್ರತಿನಿಧಿಗಳನ್ನೂ ಆಹ್ವಾನಿಸಲಾಗಿದೆ ಎಂದು ಹೇಳಿದರು.
ವಿಎಚ್‌ಪಿ ರಾಘವೇಂದ್ರ ಕೆ.ಪುಣ್ಯಕೋಟಿ, ಉಪಾಧ್ಯಕ್ಷ ಬಲರಾಮೇಗೌಡ, ಮಂಡ್ಯ ತಾಲೂಕು ಅಧ್ಯಕ್ಷ ರಾಜಶೇಖರ, ಬಜರಂಗದಳದ ಸಹಯೋಜಕ ಬಸವರಾಜು ಇದ್ದರು.