ವಿಶ್ವಪರಂಪರೆ ಪಟ್ಟಿಗೆ ಚಿತ್ರದುರ್ಗ ಕೋಟೆ ಸೇರಿಸಲು ಹೋರಾಟ

World Heritage, Chitradurga, Fort, Fight,
Published on

ಚಿತ್ರದುರ್ಗ: ರಾಜ್ಯದಲ್ಲೇ ಐತಿಹಾಸಿಕ ತಾಣವಾದ ಚಿತ್ರದುರ್ಗದ ಕಲ್ಲಿನಕೋಟೆಯನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಬೇಕು. ಇದಕ್ಕೆ ಯುನೆಸ್ಕೋ ಮಾನ್ಯತೆ ದೊರೆಯಬೇಕು. ಈ ನಿಟ್ಟಿನಲ್ಲಿ ಇಂದಿನಿಂದಲೇ ಹೋರಾಟ ಆರಂಭ ಎಂದು ಹಿರಿಯ ನಟ ದೊಡ್ಡಣ್ಣ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿತ್ರದುರ್ಗ ಈವರೆಗೂ ಜಡ್ಡುಗಟ್ಟಿದ್ದು ಸಾಕು. ಇನ್ನಾದರೂ ಸರಿಪಡಿಸಲು ಸಹಕರಿಸಿ. ವಿಶ್ವದ ಭೂಪಟದಲ್ಲಿ ನೋಡುವಂತೆ ಮಾಡೋಣ. ಬರದ ನಾಡು ಚಿತ್ರದುರ್ಗವನ್ನು ಬಂಗಾರದ ನಾಡಾಗಲು ಶ್ರಮಿಸಲಿದ್ದು, ನಮ್ಮೊಂದಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.

ಕ್ಷೇತ್ರದಲ್ಲಿ ಬದಲಾವಣೆಯ ಗಾಳಿಯಲ್ಲ, ಚಂಡಮಾರುತವೇ ಬೀಸಿತು. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ, ನನ್ನ ಅಳಿಯ ಕೆ.ಸಿ.ವೀರೇಂದ್ರ ಪಪ್ಪಿ ಅಖಂಡ ಜಯಭೇರಿಗೆ ಜಿಲ್ಲೆಯ ಜನತಾ ಜನಾರ್ದನರ ಆಶೀರ್ವಾದವೇ ಕಾರಣ ಎಂದರು.

ಯಾರೂ ಲಂಚ ಕೊಡುವ ಅಗತ್ಯವಿಲ್ಲ

ಇನ್ನು ಮುಂದೆ ಚಿತ್ರದುರ್ಗ ಕ್ಷೇತ್ರದಲ್ಲಿ ಯಾವುದೇ ಪರ್ಸೆಂಟೇಜ್ ನಡೆಯುವುದಿಲ್ಲ. ಯಾರೂ ಲಂಚ ಕೊಡುವ ಅಗತ್ಯವಿಲ್ಲ. ಎಲ್ಲವನ್ನೂ ಸರಿಪಡಿಸಲಿದ್ದೇವೆ. ನೀಡಿದ ಭರವಸೆಗಳೆಲ್ಲವೂ ಈಡೇರಲಿದೆ. ಉತ್ತಮ ಕೆಲಸಗಳನ್ನು ನನ್ನ ಅಳಿಯನಿಂದ ಮಾಡಿಸುತ್ತೇನೆ ಎಂದು ಹೇಳಿದರು.

ಮತಯಾಚಿಸುವ ವೇಳೆ ತಾಯಂದಿರಲ್ಲಿ ದೇವತಾ ಸ್ವರೂಪ ಕಂಡಿದ್ದು, ಎಲ್ಲ ಸಮುದಾಯದವರು ಕೈ ಹಿಡಿದಿದ್ದಾರೆ. ಜನರ ಋಣ ತೀರಿಸುವ ಜವಾಬ್ದಾರಿ ಇದ್ದು, ಆ ನಿಟ್ಟಿನಲ್ಲಿ ಪಪ್ಪಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನವ ಚಿತ್ರದುರ್ಗವಾಗಿ ಕ್ಷೇತ್ರ ಮಾದರಿ

ಮಾಧ್ಯಮಗಳು ಮೂರನೇ ಕಣ್ಣಾಗಿ ಕ್ಷೇತ್ರದೊಳಗೆ ತಪ್ಪುಗಳಾದಲ್ಲಿ ಎಚ್ಚರಿಸುವ, ಅಭಿವೃದ್ಧಿಗೆ ಸಲಹೆಗಳೊಂದಿಗೆ ಸಹಕರಿಸುವ ಕೆಲಸ ಮಾಡಿದರೆ, ಉತ್ತಮ ಪ್ರಗತಿ ಕಾರ್ಯಗಳೊಂದಿಗೆ ನವ ಚಿತ್ರದುರ್ಗವಾಗಿ ಕ್ಷೇತ್ರ ಮಾದರಿಯಾಗಲಿದೆ. ಇದನ್ನು ಈಡೇರಿಸುವಲ್ಲಿ ನನ್ನ ಅಳಿಯನ ಮೇಲೂ ವಿಶ್ವಾಸವಿದೆ ಎಂದು ಹೇಳಿದರು.

ವಕೀಲ ಪಿ.ಲೀಲಾಧರ ಠಾಕೂರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎನ್.ಮಹೇಶ್, ನಿವೃತ್ತ ಡಿವೈಎಸ್ಪಿ ಅಬ್ದುಲ್ ರೆಹಮಾನ್, ಶಿವರಾಜ್ ಜಾಲಿಕಟ್ಟೆ, ಕೊಟ್ರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net