

ಉಡುಪಿ: ಆರೋಗ್ಯದ ಕುರಿತು ಯಾರೂ ಕೂಡ ಅಸಡ್ಡೆ ಅಥವಾ ರ್ನಿಲಕ್ಷ್ಯ ತೋರಬಾರದು. ನಿತ್ಯವೂ ಕನಿಷ್ಠ ವ್ಯಾಯಾಮ ಮಾಡಬೇಕು . ಸಮತೋಲಿತ ಆಹಾರ ಸೇವಿಸಬೇಕು.ಬದಲಾದ ಜೀವನ ಶೈಲಿಯಿಂದ ಹಲವಾರು ಆರೋಗ್ಯ ಸಮಸ್ಯೆ ಬರುವ ಸಾಧ್ಯತೆ ಇರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಅರಿವು ಜಾಗೃತಿ ಅಗತ್ಯ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಹೇಳಿದರು.
ಶುಕ್ರವಾರ ವಿಶ್ವ ಹೃದಯ ದಿನದ ಅಂಗವಾಗಿ ಕಸ್ತೂರ್ಬಾ ವೈದ್ಯಕಿಯ ಕಾಲೇಜು ಮತ್ತು ಆಸ್ಪತ್ರೆ, ಮಾಹೆ ಮಣಿಪಾಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲ ಸಹಯೋಗದಲ್ಲಿ ರಜತಾದ್ರಿಯ ಡಿ ಸಿ ಕಚೇರಿ ಮತ್ತು ಇತರ ಕಚೇರಿಗಳ ಸರ್ಕಾರಿ ನೌಕರರಿಗೆ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್ ಅವರು, ವರ್ಷಕೊಮ್ಮೆ ಅರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರ ಮೂಲಕ ಆರೋಗ್ಯವಂತರಾಗಿದ್ದೇವೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದರು. ಉಡುಪಿ ಜಿಲ್ಲಾ ಆರೋಗ್ಯ, ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಜಿಪಂ ಸಿಪಿಓ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕಿಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಸ್ವಾಗತಿಸಿ, ಇಂದಿನ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ರಕ್ತದೊತ್ತಡ, ಮಧುಮೇಹ , ಇಸಿಜಿ, ಟೋಟಲ್ ಕೊಲೆಸ್ಟ್ರಾಲ್ ಮತ್ತು ಹೃದ್ರೋಗ ತಜ್ಞರ ಸಮಾಲೋಚನೆ ಉಚಿತವಾಗಿ ಮಾಡುತ್ತಿದ್ದೇವೆ ಎಂದು ಹೇಳಿದರು. ಸಮುದಾಯ ಆರೋಗ್ಯ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ವಂದಿಸಿದರು. ವಿಭಾಗದ ಡಾ.ಆಫ್ರೋಜ್ ಕಾರ್ಯಕ್ರಮ ನಿರೂಪಿಸಿದರು.