

ಬೆಂಗಳೂರು: ‘ನೋಡಿ ಕಲಿ, ಕೇಳಿ ತಿಳಿ’ ಎಂಬ ನಾಣ್ಣುಡಿಯಂತೆ ಚಿಕ್ಕವರಿದ್ದಾಗ ಎಲ್ಲವನ್ನು ನೋಡಿ ಕಲಿಯುವ ಹಾಗೂ ಕೇಳಿ ತಿಳಿಯುವುದು ರೂಢಿ. ಒಂದರ್ಥದಲ್ಲಿ ಜ್ಞಾನ ಸಂಪಾದನೆಗೆ ಶ್ರವಣಶಕ್ತಿ ಬಹಳ ಮುಖ್ಯ. ಆದರೆ ವಯಸ್ಸಹಜ ಕಾರಣ, ಅಪಘಾತ, ಅತಿಯಾದ ಮೊಬೈಲ್ ಬಳಕೆ, ಶಬ್ದಮಾಲಿನ್ಯ ಇತ್ಯಾದಿ ಕಾರಣದಿಂದ ಶ್ರವಣ ದೋಷ ಎದುರಿಸುವವರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಅಂತಹವರ ಆರೈಕೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷ ಮಾ.3ರಂದು ವಿಶ್ವ ಶ್ರವಣ ದಿನ ಆಚರಿಸುತ್ತಿದೆ.
ಜಾಗತಿಕವಾಗಿ 150 ಕೋಟಿಗೂ ಅಧಿಕ ಮಂದಿ ಶ್ರವಣ ಸಮಸ್ಯೆಗಳಿಂದ ಬಳಲುತ್ತಿದ್ದು, ಈ ಪೈಕಿ ಶೇ.5ಕ್ಕಿಂತ ಹೆಚ್ಚು (ಸುಮಾರು 43 ಕೋಟಿ) ಜನ ಶ್ರವಣನಷ್ಟ ತೊಂದರೆ (ಸರಿಯಾಗಿ ಕೇಳಿಸದಿರುವುದು) ಹೊಂದಿದ್ದಾರೆ. ಈ ಪ್ರಮಾಣ 2050ರ ಹೊತ್ತಿಗೆ 70 ಕೋಟಿಗೂ ಹೆಚ್ಚು ವ್ಯಕ್ತಿಗಳು ಅಥವಾ ಪ್ರತಿ ಹತ್ತು ಜನರಲ್ಲಿ ಒಬ್ಬರು ಶ್ರವಣ ನಷ್ಟದಿಂದ ಬಳಲುತ್ತಾರೆ ಎಂದು ಅಂದಾಜಿಸಲಾಗಿದೆ.
ಶ್ರವಣ ನಷ್ಟಕ್ಕೆ ಕಾರಣ ಹಲವು:
ಹೆಚ್ಚುತ್ತಿರುವ ಶಬ್ದಮಾಲಿನ್ಯದಿಂದ ಶ್ರವಣ ದೋಷ ಪ್ರಕರಣಗಳು ಏರಿಕೆಯಾಗುತ್ತಿದ್ದು, ಜತೆಗೆ ರೇಡಿಯೋ, ಟಿವಿಗೆ ಹೆಚ್ಚು ಕಿವಿಗೊಡುವುದು, ಮೈಕ್, ಅತಿಯಾದ ಮೊಬೈಲ್ ಬಳಕೆ, ಹೆಚ್ಚು ಸಮಯ ಜೋರು ಶಬ್ದ (ಶೇ. 60 ಅಧಿಕ ಡೆಸಿಬಲ್)ದಲ್ಲಿ ಹೆಡ್‌ಸೆಟ್ ಬಳಕೆಯಿಂದ ಕಿರಿಯ ವಯಸ್ಸಿನಲ್ಲೇ ಶ್ರವಣ ದೋಷಕ್ಕೆ ಒಳಗಾಗುತ್ತಿದ್ದಾರೆ.
ಹೀಗೆ ಅತಿಯಾದ ಶಬ್ದದಿಂದ ಕಿವಿಯ ಒಳಭಾಗದ ನರಕೋಶಗಳು ದರ್ಬಲಗೊಳ್ಳುತ್ತವೆ. ಇದೇ ರೀತಿ ನಿತ್ಯ ಅರ್ಧ ತಾಸಿಗೂ ಹೆಚ್ಚು ಕೇಳಿದರೆ ವಯಸ್ಸಿಗೂ ಮುನ್ನ ಶ್ರವಣ ದೋಣ ಸಂಭವಿಸುತ್ತದೆ. ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಸಮಸ್ಯೆ ಹೆಚ್ಚಾಗಿ ಮಿದುಳಿನ ನರದ ವ್ಯವಸ್ಥೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುತ್ತಾರೆ ಶ್ರವಣ ತಜ್ಞರು.
ಸಮೀಕ್ಷೆಯೊಂದರ ಪ್ರಕಾರ ನಾನಾ ಕಾರಣಗಳಿಂದ ಉತ್ತಮ ಶ್ರವಣ ಸಾಮರ್ಥ್ಯವಿರುವ ಕಿವಿಯಲ್ಲಿ 35 ಡೆಸಿಬಲ್‌ಗಳಿಗಿಂತ (ಡಿಬಿ) ಹೆಚ್ಚಿನ ಶಬ್ದದ ಅಗತ್ಯ ಇದ್ದರೆ ಶ್ರವಣ ನಷ್ಟ ಎಂದು ವ್ಯಾಖ್ಯಾನಿಸಲಾಗಿದೆ. ಈ ರೀತಿ ಶ್ರವಣ ನಷ್ಟ ಹೊಂದಿರುವ ಶೇ.80 ಜನ ಕಡಿಮೆ ಮತ್ತು ಮಧ್ಯಮ-ಆದಾಯದ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.
ಲಕ್ಷಣಗಳು:
* ಕಾಲಿಂಗ್ ಬೆಲ್, ಟಿವಿ ಹಾಗೂ ರೇಡಿಯೋ ವಾಲ್ಯೂಮ್, ಮೊಬೈಲ್ಗಳ ಶಬ್ದ ದಿನೇದಿನೆ ಕಡಿಮೆ ಕೇಳಿಸುವುದು.
* ಇತರರ ಮಾತು ಸ್ಪಷ್ಟವಾಗಿ ಕೇಳಿಸದಿರುವುದು.
ಇಂತಹ ಲಕ್ಷಣಗಳು ಗೋಚರಿಸಿದ ಕೂಡಲೇ ಶ್ರವಣ ತಜ್ಞರಲ್ಲಿ ಪರೀಕ್ಷೆ ಮಾಡಿಸಿಕೊಂಡರೆ ಶೇ.50 ಸಮಸ್ಯೆ ತಡೆಗಟ್ಟಬಹುದು.
ಕಿವಿ ಸ್ವಚ್ಛಗೊಳಿಸುವ ಅಗತ್ಯವಿಲ್ಲ:
ಕಿವಿಯ ರಚನೆ ಹಾಗೂ ವ್ಯವಸ್ಥೆ ಸ್ವತಃ ಉತ್ಪತ್ತಿಯಾಗುವ ಕುಗ್ಗೆ (ಕೊಳೆ)ಯನ್ನು ಸ್ವಚ್ಛಗೊಳಿಸಿಕೊಳ್ಳುತ್ತದೆ. ಗಟ್ಟಿಯಾದ ಆಹಾರ ಪದಾರ್ಥ ಅಗೆಯುವಾಗ ಸ್ವಾಭಾವಿಕವಾಗಿ ಉಂಟಾಗುವ ದವಡೆಯ ಚಲನದಿಂದಾಗಿ ಕಿವಿಯಲ್ಲಿನ ಸೂಕ್ಷ್ಮ ಹಾಗೂ ಸಣ್ಣ ಕುಗ್ಗೆ ಕಣಗಳು ತಾನಾಗಿಯೆ ಹೊರ ಬರುತ್ತವೆ. ಹಾಗಾಗಿ ಒದ್ದೆಬಟ್ಟೆಯಲ್ಲಿ ಕಿವಿಯ ಮೇಲ್ಭಾಗವಷ್ಟೇ ಸ್ವಚ್ಛ ಮಾಡಿಕೊಂಡರೆ ಸಾಕು. ಕಿವಿಗೆ ಎಣ್ಣೆ ಹಾಕುವುದು, ಅನಗತ್ಯವಾಗಿ ಕಡ್ಡಿ, ಪಿನ್ನುಗಳಂಥ ಚೂಪಾದ ವಸ್ತುಗಳು ಹಾಗೂ ಬಡ್ಸ್‌ಗಳನ್ನು ಬಳಸಿದರೆ ಕೊಳೆಯಕಣ ಹಿಂದೆ ಸರಿದು ಕಿವಿಯ ಒಳಗೆ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ.
ವೈದ್ಯರ ಸಲಹೆಗಳೇನು?
- ಆಡಿಯಾಲಾಜಿಸ್ಟ್ ಸಲಹೆ ಪಡೆದು ನಂತರ ಶ್ರವಣ ಸಾಧನ ಖರೀದಿಸಿ
- ಆನ್‌ಲೈನ್‌ನಲ್ಲಿ ಶ್ರವಣ ಸಾಧನ ಖರೀದಿಸಬೇಡಿ
- ಶ್ರವಣ ಸಾಧನೆ ಕಾರ್ಯಾಚರಣೆಗೆ ಬ್ಯಾಟರಿಗಳ ಅಗತ್ಯವಿದೆ
- ಶ್ರವಣ ಸಾಧನವನ್ನು ದಿನನಿತ್ಯ 8-10 ಗಂಟೆ ನಿಯಮಿತವಾಗಿ ಬಳಸಿ