

ಮಂಡ್ಯ: ಪ್ರಸಕ್ತ ದಿನಗಳಲ್ಲಿ ಮಹಿಳೆಯರ ಆರೋಗ್ಯ ಸಾಕಷ್ಟು ಉಲ್ಬಣಗೊಳ್ಳುತ್ತಿದೆ. ಇದಕ್ಕೆ ಒತ್ತಡವೇ ಕಾರಣ ಎಂದು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಆರ್.ಮನೋಹರ್ ಹೇಳಿದರು.
ನಗರದ ಹೊಸಹಳ್ಳಿಯಲ್ಲಿರುವ ಪರಿಸರ ರೂರಲ್ ಡೆವಲಪ್‌ಮೆಂಟ್ ಸಂಸ್ಥೆಯಲ್ಲಿ ಪತಂಜಲಿ ಯೋಗಶಿಕ್ಷಣ ಸಮಿತಿ, ಮಮತೆಯ ಮಡಿಲು ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳೆಯರಿಗೆ ಉಚಿತ ಯೋಗ ತರಬೇತಿ ಹಾಗೂ ವಿಶ್ವ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಆಹಾರ ಸಮತೋಲನ ಕಾಪಾಡಿಕೊಂಡು ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಿಳೆಯರ ಆರೋಗ್ಯ ಬಗ್ಗೆ ವಿಶೇಷ ಕಾಳಜಿ ತೋರಿಸಲು ಗ್ರಾಮೀಣ ಪ್ರದೇಶಗಳಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಮಿತ್ರರು, ದಾದಿಯರು ಹೀಗೆ ವಿವಿಧ ಸ್ಥರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದಾಗ್ಯೂ ಮಹಿಳೆಯರ ಆರೋಗ್ಯದ ಸ್ಥಿತಿ ಗತಿಗಳನ್ನು ಅರ್ಥೈಸಿಕೊಂಡು ಆರೋಗ್ಯದಲ್ಲಿ ಸುಧಾರಣೆ ಕಾಣಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿವೆ. ಬಹು ಮುಖ್ಯವಾಗಿ ಮಹಿಳೆಯರು ಜಾಗೃತಿ ಹೊಂದಿದರೆ ಮುಂದೆ ಬರಬಹುದಾದ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಿಸಿದರು.
ಮಹಿಳೆಯರು ಎಚ್ಚೆತ್ತುಕೊಂಡರೆ ಕುಟುಂಬದಲ್ಲಿ ಪ್ರತಿ ಮಕ್ಕಳು ಮತ್ತು ಪುರುಷರಿಗೆ ಆರೋಗ್ಯದ ಕಾಳಜಿ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ತಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಆರೋಗ್ಯದ ತಪಾಸಣೆ ಮಾಡಿಸಿ ಮುಂದೆ ಎದುರಾಗಬಹುದಾದ ಹಲವು ರೋಗಗಳನ್ನು ತಡೆಗಟ್ಟಬೇಕು ಎಂದರು.
ಪರಿಸರ ಸಂಸ್ಥೆಯ ಕಾರ್ಯದರ್ಶಿ ಕೆ.ಪಿ.ಅರುಣಕುಮಾರಿ ಮಾತನಾಡಿ, ಮಹಿಳೆಯರ ಆರೋಗ್ಯದ ಬಗ್ಗೆ ವಿಶೇಷ ಆಸಕ್ತಿ ತಾಳಿ ಕಳೆದ ಒಂದು ವರ್ಷದಿಂದ ದೈನಂದಿನ ಜೀವನದ ಚಟುವಟಿಕೆಗಳ ಬಗ್ಗೆ ಕ್ರಿಯಾಶೀಲತೆಯಲ್ಲಿ ತೊಡಗಿಸಿಕೊಳ್ಳುವ ಹಾಗೆ ಉಚಿತವಾಗಿ ಯೋಗ ತರಬೇತಿ ನಡೆಸುತ್ತಾ ಬರಲಾಗುತ್ತಿದೆ. ಯೋಗ ತರಬೇತಿ ಪಡೆದ ನಂತರ ಹಲವು ಮಹಿಳೆಯರು ಅವರೇ ಶಿಕ್ಷಕಿಯರಾಗಿ ಅವರೇ ಯೋಗ ತರಬೇತಿ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಪತಂಜಲಿ ಯೋಗ ಸಂಸ್ಥೆ ಸಂಚಾಲಕ ಶಂಕರನಾರಾಯಣಶಾಸ್ತ್ರಿ ಮಾತನಾಡಿ, ಯೋಗವನ್ನು ಅಭ್ಯಾಸ ಮಾಡಿ ಅವರೇ ಬೇರೆ ಬೇರೆ ತಂಡಗಳನ್ನು ಕಟ್ಟಿಕೊಂಡು ತರಬೇತಿ ನೀಡುತ್ತಿರುವ ಮಹಿಳೆಯ ಕಾರ್ಯ ಶ್ಲಾಘನೀಯ. ಸೇವೆಯಲ್ಲಿ ಪ್ರತಿಫಲಾಪೇಕ್ಷೆ ಇಟ್ಟುಕೊಳ್ಳಬಾರದು. ಸೇವೆಯಲ್ಲಿ ಅಪೇಕ್ಷೆಯನ್ನು ಇಟ್ಟುಕೊಂಡು ಮಾಡಿದರೆ ಅದು ಉದ್ಯಮವಾಗುತ್ತದೆ. ನಿಷ್ಕಲ್ಮಶವಾಗಿ ಸೇವೆ ಸಲ್ಲಿಸುವುದು ತುಂಬಾ ಅಭಿನಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಯೋಗೀಶ್, ಯೋಗ ಗುರು ಶಂಕರ್, ಯೋಗ ತರಬೇತಿ ಕೇಂದ್ರದ ಚಂದ್ರಕಲಾ, ಶಾಂತಾ, ಗೀತಾ ಕಾಮತ್ ಇತರರಿದ್ದರು.