ಜಿಲ್ಲೆಯಲ್ಲಿ ಶೇ.13ರಷ್ಟು ಜನರಿಗೆ ಮಧುಮೇಹ, ರಕ್ತದೊತ್ತಡ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ಮಾಹಿತಿ

Aarogya Dina)
Published on

ಮಂಡ್ಯ: ಪ್ರಸ್ತುತ ದಿನಗಳಲ್ಲಿ ಜಿಲ್ಲೆಯಲ್ಲಿ ಶೇ.13ರಷ್ಟು ಜನರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಎನ್.ಧನಂಜಯ ಹೇಳಿದರು.

ನಗರದ ಮಾಂಡವ್ಯ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಆಯೋಜಿಸಿದ್ದ ವಿಶ್ವ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಮಂಡ್ಯದಲ್ಲಿ 18 ಲಕ್ಷ ಜನರ ಪೈಕಿ 4 ಲಕ್ಷದಷ್ಟು ಜನರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಹಿಂದೆಲ್ಲ ಹೃದಯಾಘಾತ ಇರಲ್ಲೇ ಇಲ್ಲ, ಯಾರೋ ಒಬ್ಬರಿಗೆ ಹೃದಯಬೇನೆಯ ಆಘಾತ ಆಗುತ್ತಿತ್ತು. ಈವಾಗ ಬದಲಾವಣೆಯಾಗಿದೆ. 40 ರಿಂದ 50 ವರ್ಷಕ್ಕೆ ಹೃದಯಾಘಾತ ಆಗುತ್ತಿದೆ. ಕ್ಯಾನ್ಸರ್, ಮಧುಮೇಹ ತುಂಬ ವಿರಳವಿತ್ತು, ಈಗ ಹೆಚ್ಚಳವಾಗಿದೆ ಎಂದು ನುಡಿದರು.

ಜಿಲ್ಲೆಯ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ಮಾಡಲಾಗಿದೆ. ಜನರ ಆಹಾರ ಪದ್ಧತಿ, ಜೀವನ ಶೈಲಿ ಬದಲಾಗುತ್ತಿರುವುದರಿಂದ ಆರೋಗ್ಯ ಹದಗೆಡುತ್ತಿದೆ. ಕೆಲ ವರ್ಷದ ಹಿಂದೆ ಕುಟುಂಬಕ್ಕೆ ಆಗುವಷ್ಟು ತರಕಾರಿ, ಸೊಪ್ಪುಗಳನ್ನು ಮನೆಯಲ್ಲಿಯೇ ಬೆಳೆದುಕೊಳ್ಳುತ್ತಿದ್ದರು. ಆದರೆ ಈಗ ಹಳ್ಳಿ ಜನರು ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುವ ಜೀವನಶೈಲಿಗೆ ಬಂದಿದ್ದೇವೆ ಎಂದರು.

ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ 2023 ಅನ್ನು ಸುವರ್ಣ ಸಂಭ್ರಮವನ್ನಾಗಿ ಆಚರಿಸುತ್ತಿದೆ. ಎಲ್ಲರಿಗೂ ಆರೋಗ್ಯ ಎಂಬ ಘೋಷವಾಕ್ಯವನ್ನು ನೀಡಿದೆ. ಇಂದಿನಿಂದಲೇ ಎಲ್ಲವನ್ನು ಹಿತ ಮಿತವಾಗಿ ಬಳಸುವುದರಿಂದ ಆರೋಗ್ಯ ಸಂಪತ್ತು ವೃದ್ಧಿಸುತ್ತದೆ. ಪೂರ್ವಿಕರ ಆಹಾರ ಪದ್ಧತಿ, ದುಡಿಮೆ, ಮನುಷ್ಯನ ಆರೋಗ್ಯವನ್ನು ಕಾಪಾಡುತ್ತದೆ. ಇಂದಿನ ಜನತೆ ಎಲ್ಲವನ್ನು ಕುಳಿತಲ್ಲೆ ಮಾಡಿಕೊಳ್ಳುತ್ತಿದ್ದಾರೆ. ಆರೋಗ್ಯಕಡೆ ಗಮನವಿಲ್ಲದೆ ಒತ್ತಡದ ಜೀವನದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಇನ್ನಾದರೂ ಆರೋಗ್ಯದ ಬಗ್ಗೆ ಜಾಗೃತಿ, ದುಡಿಮೆ ಮಾಡುವುದು ಉತ್ತಮ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಅಜ್ಜಿ-ಅಜ್ಜಂದಿರೇ ಮಕ್ಕಳು ಮೊಮ್ಮಕ್ಕಳನ್ನು ಆಸ್ಪತ್ರೆಗೆ ವೈದ್ಯರ ಬಳಿಗೆ ಕರೆತರುವ ದಿನಗಳು ಬಂದಿವೆ. ಇಂದಿನ ಯುವಜನತೆ ಆರೋಗ್ಯದ ಕಾಳಜಿ ಹೆಚ್ಚಿಸಿಕೊಳ್ಳಬೇಕು. ಇತರರಿಗೂ ಅರಿವು ಮೂಡಿಸುವ ಕಾರ್ಯದಲ್ಲಿ ಇಂತಹ ಆರೋಗ್ಯ ಅರಿವು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ವೇಣುಗೋಪಾಲ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಶಿವಾನಂದ, ರೆಡ್‌ಕ್ರಾಸ್ ಜಂಟಿ ಕಾರ್ಯದರ್ಶಿ ರಂಗಸ್ವಾಮಿ ಇತರರಿದ್ದರು.

ಇದೇ ಸಂದರ್ಭದಲ್ಲಿ ಸ್ವೀಪ್ ಜಿಲ್ಲಾ ಸಮಿತಿ ಆಯೋಜಿಸಿದ್ದ ಮತದಾನದ ಅರಿವು ಮತ್ತು ಜಾಗೃತಿ ಅಭಿಯಾನದಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಪ್ರಮಾಣ ವಚನ ಸ್ವೀಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net