ಅರಣ್ಯ ಭೂಮಿಯ ಶ್ವಾಸಕೋಶವಿದ್ದಂತೆ

21 KRN-1
ಕೆ.ಆರ್.ನಗರದ ಪ್ರಥಮ ದರ್ಜೆ ಕಾಲೇಜಿನ ಭೂಗೋಳ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಅರಣ್ಯ ದಿನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಪ್ರೊ.ಎನ್.ಎಸ್.ಬಾಲಸುಬ್ರಮಣ್ಯ, ಎಂ.ಕೆ.ಕೃಷ್ಣಮೂರ್ತಿ, ಜಿ.ಎನ್.ಭಾಗೀರತಿ, ಕೆ.ಎನ್.ಸಿದ್ದರಾಜು ಇತತರರು ಇದ್ದರು.
Published on

ಕೆ.ಆರ್.ನಗರ: ಭೂಮಿಯ ಆರೋಗ್ಯ ಮತ್ತು ಪರಿಸರ ಸಮತೋಲನದಲ್ಲಿ ಅರಣ್ಯಗಳ ಪಾತ್ರ ಬಹಳ ಪ್ರಮುಖವಾದದ್ದು ಎಂದು ಭೂಗೋಳ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಂ.ಕೆ.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ವಿಶ್ವ ಅರಣ್ಯ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅರಣ್ಯಗಳು ಭೂಮಿಯ ಶ್ವಾಸಕೋಶವಿದ್ದಂತೆ. ಒಂದು ಮರ ತನ್ನ ಜೀವಿತಾವಧಿಯಲ್ಲಿ ಲಕ್ಷ, ಲಕ್ಷ ಟನ್‌ಗಳಷ್ಟು ಆಮ್ಲಜನಕ ಉತ್ಪಾದಿಸುತ್ತದೆ. ಇದನ್ನು ನಾವು ಖರೀದಿಸಲು ಕೋಟಿಗಟ್ಟಲೆ ಹಣ ವ್ಯಯಿಸಬೇಕಾಗುತ್ತದೆ. ಆದರೆ ಮರಗಳು ನಮಗೆ ಉಚಿತವಾಗಿ ನೀಡುತ್ತಿವೆ ಎಂದರು.

ಅರಣ್ಯ ಸಂರಕ್ಷಣೆಯಲ್ಲಿ ಮಾನವನ ಜವಾಬ್ದಾರಿ ಬಹಳ ದೊಡ್ಡದು. ಆಹಾರ, ನೆರಳು, ಮಳೆ, ಗಾಳಿ ತರಿಸುವ ಕಾಡುಗಳನ್ನು ನಾವೆಲ್ಲರೂ ಸಂರಕ್ಷಣೆ ಮಾಡಬೇಕು. ಇದು ನಮ್ಮ ಆದ್ಯ ಕರ್ತವ್ಯದ ಜತೆಗೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ. ಅರಣ್ಯ ಸಂಪತ್ತು ಒಂದು ದೇಶದ ಸುಭಿಕ್ಷತೆ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಕೂಡ ತಿಳಿಸುತ್ತದೆ ಎಂದು ತಿಳಿಸಿದರು.

ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ.ಎನ್.ಎಸ್.ಬಾಲಸುಬ್ರಮಣ್ಯ ಮಾತನಾಡಿ, ಅರಣ್ಯಗಳ ಪ್ರಾಮುಖ್ಯತೆ, ಅರಣ್ಯ ನಾಶಕ್ಕೆ ಮಾನವನ ದೂರಾಸೆ ಹೇಗೆ ಕಾರಣವಾಗಿದೆ. ಅದರಿಂದಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು.

ವಿದ್ಯಾರ್ಥಿಗಳು ಅರಣ್ಯ ದಿನದ ಬಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಭೂಗೋಳ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಜಿ.ಎನ್.ಭಾಗೀರತಿ, ಕೆ.ಎನ್.ಸಿದ್ದರಾಜು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net