

ಹುಬ್ಬಳ್ಳಿ: ಜಲ ಮಾಲಿನ್ಯ. ವಾಯು ಮಾಲಿನ್ಯ ಸೇರಿ ಭೂಮಿಯ ಮೇಲಿನ ಯಾವುದೇ ಸಮಸ್ಯೆಗಳನ್ನು ತಡೆಯುವ ಶಕ್ತಿ ಇರುವುದು ಮರಗಳಿಗೆ ಮಾತ್ರ, ಸದ್ಯದ ನೀರಿನ ಕೊರತೆಗೂ ಗಿಡಮರಗಳೇ ಪರಿಹಾರವಾಗಿವೆ ಎಂದು ಪರಿಸರ ತಜ್ಞ, ಟ್ರೀ ಡಾಕ್ಟರ್ ಎಂದು ಖ್ಯಾತರಾದ ಬೆಂಗಳೂರಿನ ವಿಜಯ ನಿಶಾಂತ ಹೇಳಿದರು.
ಗ್ರೀನ್ ಕರ್ನಾಟಕ ಅಸೋಸಿಯೇಶನ್, ವೀ ಕೇರ್ ಫೌಂಡೇಷನ್ ಹಾಗೂ ವಸುಂಧರಾ ಫೌಂಡೇಷನ್ ಸಹಯೋಗದೊಂದಿಗೆ ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಏರ್ಪಡಿಸಿದ್ದ ವಿಶ್ವ ಅರಣ್ಯ ಹಾಗೂ ಜಲ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಅಭಿವೃದ್ಧಿ ಎಂದರೆ ಕೇವಲ ಕೆರೆ ಮುಚ್ಚುವುದು, ಮರಗಳನ್ನು ಕಡಿಯುವುದು ಎಂದುಕೊಂಡಿದ್ದಾರೆ. ಗಿಡ ಮರ ಕಡಿಯುವ ಹಕ್ಕು ಯಾರಿಗೂ ಇಲ್ಲ. ಗಿಡ ಬೆಳೆಸಲು ಸಾಧ್ಯವಾಗದಿದ್ದರೆ ಕನಿಷ್ಠ ಪಕ್ಷ ಇರುವುದನ್ನು ಉಳಿಸಿಕೊಂಡು ಹೋಗುವ ಕೆಲಸವನ್ನಾದರೂ ಮಾಡಬೇಕು. ಈ ಮೂಲಕ ಪ್ರತಿಯೊಬ್ಬರೂ ಪರಿಸರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಬಹುದು ಎಂದು ಸಲಹೆ ನೀಡಿದರು.
ಕಾಂಕ್ರೀಟಿಕರಣ ಮಾಡಿದ್ದರಿಂದ ಬೆಂಗಳೂರಿನಲ್ಲಿ ಮಳೆ ನೀರು ಭೂಮಿ ಆಳಕ್ಕೆ ಹೋಗುತ್ತಿಲ್ಲ. ಇದೇ ಸ್ಥಿತಿ ರಾಜ್ಯದ ಎಲ್ಲ ಕಡೆ ಕಾಣುತ್ತಿದೆ. ಬೆಂಗಳೂರಿನಲ್ಲಿ ಆದ ತಪ್ಪು ಎಲ್ಲ ಕಡೆ ಆಗಬಾರದು. ಮರಗಳಿದ್ದರೆ ಪರಿಸರ ಸಮತೋಲನದಲ್ಲಿರುತ್ತದೆ ಎಂದರು.
ಮಳೆ ಹೋಗುತ್ತದೆ:
ಹುಬ್ಬಳ್ಳಿ -ಅಂಕೋಲಾ ರೈಲು ಪಶ್ಚಿಮ ಘಟ್ಟದಲ್ಲಿ ಹಾದು ಹೋಗಲಿದೆ. ಈ ಯೋಜನೆಗೆ ನಮ್ಮ ವಿರೋಧ ಇಲ್ಲ. ಆದರೆ, ಮರ ಕಡಿಯುವುದು ಬೇಡ ಎಂಬುದಷ್ಟೇ ನಮ್ಮ ಕಳಕಳಿ. ಒಂದು ವೇಳೆ ಪಶ್ಚಿಮ ಟ್ಟಕ್ಕೆ ಪೆಟ್ಟಾದರೆ ಮುಂದಿನ ದಿನಗಳಲ್ಲಿ ಹುಬ್ಬಳ್ಳಿ ಧಾರವಾಡ ಮಳೆ ಕಾಣುವುದಿಲ್ಲ ಎಂದು ನಿಶಾಂತ ಎಚ್ಚರಿಸಿದರು.
ದೂರು ನೀಡಿ:
ರಸ್ತೆ ಬದಿಯ ಮರಗಳಿಗೆ ಮೊಳೆ ಹೊಡೆಯುವುದು ಅಪರಾಧ. ಇಂತಹ ಟನೆಗಳು ಕಂಡು ಬಂದರೆ ಲೋಕಾಯುಕ್ತಕ್ಕೆ ದೂರು ನೀಡಬಹುದು. ಪ್ರತಿಯೊಬ್ಬರೂ ಪರಿಸರ ಜಾಗೃತಿ ಬೆಳೆಸಿಕೊಳ್ಳಬೇಕು. ಅಭಿವೃದ್ಧಿ ಹೆಸರಲ್ಲಿ ಮರಗಳನ್ನು ಉರುಳಿಸದೇ ಅವುಗಳನ್ನು ಸ್ಥಳಾಂತರಿಸುವ ಯೋಜನೆ ರೂಪಿಸಬೇಕು ಎಂದರು.
ಜಲ ಪತ್ರಕರ್ತ ರಾಧಾಕೃಷ್ಣ ಭಡ್ತಿ ಮಾತನಾಡಿ, ಅಂತರ್ಜಲ ದಿನದಿಂದ ದಿನಕ್ಕೆ ಕೆಳಮಟ್ಟಕ್ಕೆ ಇಳಿಯುತ್ತಿದೆ. ನೀರಿಗಿಂತ ಶುದ್ಧವಾದದ್ದು ಯಾವುದೂ ಇಲ್ಲ. ಇತ್ತೀಚಿನ ದಿನಗಳಲ್ಲಿ ಅದು ನಾನಾ ಕಾರಣಗಳಿಂದಾಗಿ ಅಶುದ್ಧವಾಗುತ್ತಿದೆ. ಪರಿಸರ ಸುಂದರವಾಗಿ ಉಳಿದರೆ ಮಾತ್ರ ನೀರು ಸಹ ಉತ್ತಮವಾಗಿರಲು ಸಾಧ್ಯ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ, ಅಂಗನವಾಡಿ ಮಕ್ಕಳಿಗೆ ಏಕಾಂಗಿಯಾಗಿ ಬಾವಿ ತೋಡಿದ ಗೌರಿ ನಾಯ್ಕ, ಆರಂಭದಲ್ಲಿ ಸ್ವಂತ ಜಮೀನಿಗಾಗಿ ಎರಡು ಬಾವಿ ತೋಡಿದ್ದೆ. ಸಮಾಜಕ್ಕೆ ಏನಾದರೂ ನೀಡಬೇಕೆಂದು ನಿರ್ಧರಿಸಿ ಶಿರಸಿ ಗಣೇಶನಗರದ ಅಂಗನವಾಡಿ ಜಾಗದಲ್ಲಿ ಬಾವಿ ತೋಡಿ ಕೊಟ್ಟೆ. ಚಿನ್ನ, ಬೆಳ್ಳಿ ಆಭರಣಕ್ಕಿಂತ ಮಕ್ಕಳಿಗೆ ನೀರು ಕೊಟ್ಟಿರುವ ಸಂತೋಷಕ್ಕೆ ಯಾವುದೂ ಸಾಟಿ ಅಲ್ಲ ಎಂದರು.
ಊಟಿಯಾಗಲಿದೆ:
ಪ್ರಾಸ್ತಾವಿಕ ಮಾತನಾಡಿದ ಗ್ರೀನ್ ಕರ್ನಾಟಕ ಅಸೋಸಿಯೇಶನ್ ಅಧ್ಯಕ್ಷ ಚನ್ನು ಹೊಸಮನಿ, ನಮ್ಮ ಹುಬ್ಬಳ್ಳಿ ಯಾವುದರಲ್ಲೂ ಕಡಿಮೆ ಇಲ್ಲ. ಎಲ್ಲರೂ ಗಿಡ-ಗಳನ್ನು ನೆಟ್ಟು ಪೋಷಿಸಿದರೆ, ಮಹಾನಗರವು ಮತ್ತೊಂದು ಊಟಿ ಆಗಿ ಪರಿವರ್ತನೆಯಾಗಲಿದೆ. ಈ ದಿಸೆಯಲ್ಲಿ ಪರಿಸರ ಕಾಳಜಿ ಹೊಂದಿದ ಸಂಟನೆಗಳೊಂದಿಗೆ ಯುವಕರು, ಮಕ್ಕಳು ಕೈಜೋಡಿಬೇಕು ಎಂದರು.
ಎಲ್ ಆ್ಯಂಡ್ ಟಿ ಯೋಜನಾ ವ್ಯವಸ್ಥಾಪಕ ಹರಿಪ್ರಸಾದ ಪಾಲ್ದುಗು ಮಾತನಾಡಿದರು. ವಸುಂಧರಾ ಫೌಂಡೇಷನ್ ಅಧ್ಯಕ್ಷ ಮೇಘರಾಜ ಕೆರೂರ, ವಿ ಕೇರ್ ಫೌಂಡೇಷನ್ ಅಧ್ಯಕ್ಷ ಗಂಗಾಧರ ಗುಜಮಾಗಡಿ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಇತರರು ಇದ್ದರು.