ಸಂಘಟನೆ ಒಗ್ಗಟ್ಟಾಗಿ ಹೋರಾಟ ಮಾಡಲಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಿವಿಮಾತು

World Farmers Day Mandya
Published on

ಮಂಡ್ಯ: ರೈತರ ಸಮಸ್ಯೆ ಪರಿಹಾರ ಮಾಡಬೇಕೆಂದು ಹೋರಾಟ ಮಾಡುವುದು ಎಲ್ಲ ಚಳವಳಿ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ರೈತ ಸಂಘಗಳು ಒಗ್ಗಟ್ಟಾಗಬೇಕು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಲಹೆ ನೀಡಿದರು.

ನಗರದ ಹಳೇ ತಾಲೂಕು ಕಚೇರಿಯಲ್ಲಿರುವ ತಮ್ಮ ಶಾಸಕರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ರೈತ ದಿನಾಚರಣೆ ಹಾಗೂ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರ 75ನೇ ವರ್ಷದ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ಸರ್ಕಾರಗಳಿಂದ ಆಗದೇ ಇರುವ ಕೆಲಸಗಳನ್ನು ರೈತ ಸಂಘಗಳಿಂದ ಮಾಡಬಹುದು. ಪ್ರತಿ ಹಳ್ಳಿಯಲ್ಲಿ ರೈತರು ಇದ್ದಾರೆ. ಆ ಶಕ್ತಿ ಉಪಯೋಗಿಸಿಕೊಂಡು ರೈತ ಸಂಘವನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವುದು ನಮ್ಮ ಉದ್ದೇಶ. ಸತತವಾಗಿ ಹೋರಾಟ ನಡೆಯಬೇಕು. ರೈತ ಸಂಘಗಳು ಒಗ್ಗಟ್ಟಾಗಬೇಕು ಎಂದರು.

ರೈತರು ಬೆಳೆ ಬೆಳೆಯುವ ಪದ್ಧತಿಗಳನ್ನು ಬದಲಾವಣೆ ಮಾಡಬೇಕು. ಇಲ್ಲದಿದ್ದರೆ ಬೆಳೆಗೆ ಬೆಲೆ ಸಿಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆ ಆಗುತ್ತಿದೆ. ಆದ್ದರಿಂದ ರೈತರು ಬೆಳೆ ಬೆಳೆಯುವ ಪದ್ಧತಿಗಳನ್ನು ಬದಲಾವಣೆ ಮಾಡಿಕೊಳ್ಳಿ. ಡಿ.23ರಂದು ರಾಷ್ಟ್ರೀಯ ರೈತರ ದಿನ ಎಂದು ಆಚರಿಸಲಾಗುತ್ತದೆ. ಈ ದಿನವು ರೈತ ಸಮುದಾಯವನ್ನು ಉನ್ನತೀಕರಿಸುವ ಕೃಷಿ ಸುಧಾರಣೆ ಮತ್ತು ನೀತಿಗಳನ್ನು ಪ್ರತಿಪಾದಿಸಿದ ರೈತ ನಾಯಕ ಚೌಧರಿ ಚರಣ್ ಸಿಂಗ್ ಜನ್ಮದಿನವಾಗಿದೆ ಎಂದರು

ರೈತ ಮುಖಂಡ ಮಂಜೇಶ್‌ಗೌಡ ಮಾತನಾಡಿ, ಸರ್ಕಾರ ಹಾಗೂ ಬಂಡವಾಳ ಶಾಹಿಗಳ ವಿರುದ್ಧ ರೈತರು ದೊಡ್ಡ ಶಕ್ತಿಯಾಗಿ ಚಳವಳಿ ಮಾಡಬೇಕು. ಇಲ್ಲದಿದ್ದರೆ ರೈತ ಕುಲ ಉಳಿಯಲು ಸಾಧ್ಯವಿಲ್ಲ. ಹರಿದು ಹಂಚಿಹೋಗಿರುವ ಎಲ್ಲ ರೈತ ಸಂಘಟನೆಗಳು ಒಂದು ತೆಕ್ಕೆಗೆ ಬಂದಾಗ ರೈತ ಸಂಘಟನೆ ಬಲಗೊಳ್ಳುತ್ತದೆ. ಯುವಶಕ್ತಿಗೆ ರೈತ ಚಳವಳಿ ಮುಂದಾಳತ್ವ ನೀಡಬೇಕು. ಅವರಿಗೆ ಸಹಕಾರ ನೀಡಬೇಕು. ಈ ಹಿನ್ನೆಲೆಯಲ್ಲಿ ಒಗ್ಗಟ್ಟಾಗಿ ಚಳವಳಿ ಬಲಪಡಿಸಲು ಎಲ್ಲರೂ ಪಣತೊಡೋಣ ಎಂದು ಹೇಳಿದರು.

ರೈತ ಮುಖಂಡರಾದ ಶಂಭುನಹಳ್ಳಿ ಸುರೇಶ್, ಇಂಡುವಾಳು ಚಂದ್ರಶೇಖರ್, ಸೊ.ಸಿ.ಪ್ರಕಾಶ್, ಮರಿಚನ್ನೇಗೌಡ, ಅಣ್ಣೂರು ಮಹೇಂದ್ರ, ಶಿವಳ್ಳಿ ಚಂದ್ರು, ಸಿದ್ದೇಗೌಡ, ಸುರೇಶ್, ದರ್ಶನ್ ಪುಟ್ಟಣ್ಣಯ್ಯ ಅವರ ಮಕ್ಕಳಾದ ವಚನ್, ನಿಧಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net