

ಅವಿನಾಶ್ ಜೈನಹಳ್ಳಿ ಮೈಸೂರು
ಪ್ರತಿವರ್ಷ ವಿಶ್ವ ಯೋಗ ದಿನವನ್ನು ಜೂನ್ 21 ರಂದು ವಿಶ್ವಾದ್ಯಂತ ಆಚರಣೆ ಮಾಡಲಾಗುತ್ತದೆ. ಅಂತೆಯೆ, ಮತ್ತೊಂದು ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆಗೆ ಹತ್ತಿರವಾಗುತ್ತಿದ್ದೇವೆ.
ಮಾನಸಿಕ ಒತ್ತಡ ನಿವಾರಣೆ ಮತ್ತು ದೈಹಿಕ ಸೌಂದರ್ಯಕ್ಕಾಗಿ ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಹೆಚ್ಚಿನ ಜನರು ಯೋಗದ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆಯಾಗಿರುವುದೇ ಇದಕ್ಕೆ ಮೂಲ ಕಾರಣ. ಇಂತಹ ಕಲೆಯನ್ನು ಶತಮಾನಗಳಿಂದ ಇಡೀ ವಿಶ್ವಕ್ಕೆ ಕಲಿಸುತ್ತಿರುವ ಕೀರ್ತಿ ಮೈಸೂರಿಗೆ ಹಾಗೂ ಮೈಸೂರಿನ ಯೋಗ ಗುರುಗಳಿಗೆ ಸಲ್ಲುತ್ತದೆ. ಇಂತಹ ಊರಿನಲ್ಲಿ ಯೋಗ ಅರಳಲು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಕಾರಣ ಎನ್ನುವುದು ವಿಶೇಷ.
ಮೈಸೂರು ನಗರ ವಿವಿಧ ಸಂಸ್ಕೃತಿ, ಆಚಾರ-ವಿಚಾರಗಳನ್ನು ತನ್ನೊಳಗೆ ಹುದುಗಿಸಿಕೊಂಡಿದ್ದು, ಅನೇಕ ವರ್ಷಗಳಿಂದ ಪ್ರಪಂಚದಾದ್ಯಂತ ಯೋಗದ ಕಂಪನ್ನು ಪಸರಿಸುತ್ತ ಬಂದಿದೆ. ಈ ಹಿನ್ನೆಲೆಯಲ್ಲಿ ‘ಯೋಗ ನಗರಿ’ ಎಂದೇ ಪ್ರಖ್ಯಾತಿ ಪಡೆದಿದೆ.
ಶತಮಾನದ ಹಿಂದೆಯೇ ಮೈಸೂರು ಪ್ರಾಂತ್ಯವನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸಿರುವ ನಾಲ್ವಡಿ ಕೃಷ್ಣರಾಜ ಒಡೆಯರ್, ಯೋಗದ ಅಭಿವೃದ್ಧಿಗೂ ಕೊಡುಗೆ ನೀಡಿರುವುದನ್ನು ಹಾಗೂ ಮೈಸೂರು ಯೋಗ ಶಿಕ್ಷಕರ ಕೊಡುಗೆಯನ್ನು ಯೋಗ ದಿನ ಸಮಯದಲ್ಲಿ ಸ್ಮರಿಸಬೇಕಿದೆ.
ಮೈಸೂರು ಸಂಸ್ಥಾನದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿಯೇ ರಾಜಮನೆತನದವರು ಯೋಗ ಕಲಿಯುತ್ತಿದ್ದ ಉದಾಹರಣೆಗಳಿವೆ. ಬಳಿಕ ಯೋಗವನ್ನು ಸಾರ್ವಜನಿಕವಾಗಿ ಅಭಿವೃದ್ಧಿಪಡಿಸುವ ಜತೆಗೆ, ಮೈಸೂರಿನಲ್ಲಿ ಯೋಗ ಹಾಗೂ ಯೋಗ ಗುರುಗಳಿಗೆ ನೆಲೆ ಕೊಡಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲಬೇಕು. ಯೋಗದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಅವರು ಮದ್ರಾಸಿನಿಂದ ಕೃಷ್ಣಮಾಚಾರ್ಯರನ್ನು ಮೈಸೂರಿಗೆ ಕರೆಸಿ ಯೋಗ ಅಭಿವೃದ್ಧಿಗೆ ಕಾರಣರಾದರು. ಅಂತೆಯೆ, ಅವರ ಬಹುತೇಕ ಕೃತಿಗಳಲ್ಲಿ ಯೋಗದ ಬಗ್ಗೆ ಉಲ್ಲೇಖಿಸಿದ್ದಾರೆ.
ನಾಲ್ವಡಿ ಅವರು ಸಂಸ್ಕೃತ ಪಾಠಶಾಲೆಯಲ್ಲಿ ಯೋಗಕ್ಕೆ ಪ್ರತ್ಯೇಕ ವಿಭಾಗವನ್ನೇ ಸ್ಥಾಪಿಸಿದ್ದರು. ಅದಕ್ಕೆ ಕೃಷ್ಣಮಾಚಾರ್ಯರನ್ನು ಮುಖ್ಯಸ್ಥರನ್ನಾಗಿ ನೇಮಿಸಿ, ಜಗನ್ಮೋಹನ ಅರಮನೆ ಹಿಂಭಾಗ ಅವರ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಕೃಷ್ಣಮಾಚಾರ್ಯರು ಅರಸು ಮನೆತನದವರು ಹಾಗೂ ಸಾರ್ವಜನಿಕರಿಗೆ ಯೋಗ ಕಲಿಸುತ್ತಿದ್ದರು. ಅವರೇ ಮುಂದೆ ಮೈಸೂರು ಪ್ರಾಂತ್ಯದ ಯೋಗ ಶಿಕ್ಷಕರ ಮೂಲ ಗುರುಗಳಾಗುತ್ತಾರೆ. ಅವರ ನೇರ ಶಿಷ್ಯರಾದ ಬಿಕೆಎಸ್ ಅಯ್ಯಂಗಾರ್, ಪಟ್ಟಾಬಿ ಜೋಯಿಸ್ ಮತ್ತು ಬಿಎನ್‌ಎಸ್ ಅಯ್ಯಂಗಾರ್ ‘ಅಷ್ಟಾಂಗ ವಿನ್ಯಾಸ ಯೋಗ’ವನ್ನು ವಿಶ್ವಾದ್ಯಂತ ಪ್ರಚುರಪಡಿಸಿದ್ದಾರೆ.
ಸದ್ಯ ಕೇಶವಮೂರ್ತಿ, ಶಂಕರನಾರಾಯಣ ಜೋಯಿಸ್, ಬಿಎನ್‌ಎಸ್ ಅಯ್ಯಂಗಾರ್ ಮೈಸೂರಿನಲ್ಲಿರುವ ಹಿರಿಯ ಯೋಗ ಗುರುಗಳಾಗಿದ್ದಾರೆ. ಜತೆಗೆ ರಾಘವೇಂದ್ರ ಪೈ, ಡಾ.ಯೋಗ ಗಣೇಶ್‌ಕುಮಾರ್, ಶ್ರೀಹರಿ, ಅನಂತು, ಶಶಿಕುಮಾರ್, ಎಂ.ಎಸ್.ರಮೇಶ್‌ಕುಮಾರ್, ಎಚ್.ಟಿ.ಭಾಸ್ಕರ್, ಗೀತಾ ಕುಮಾರ್ ಸೇರಿದಂತೆ ಅನೇಕ ಹಿರಿಯರು ಯೋಗ ಪಸರಿಸುವ ಕೆಲಸ ಮಾಡುತ್ತಿದ್ದಾರೆ.
ಯೋಗ ಪರಂಪರೆ ಹೊಂದಿರುವ ಮೈಸೂರಿನಲ್ಲೀಗ ವಿವೇಕಾನಂದ ಯೋಗ ಎಜುಕೇಷನ್ ಮತ್ತು ರಿಸರ್ಚ್ ಸಂಸ್ಥೆ, ಅಷ್ಟಾಂಗ ಯೋಗ ವಿದ್ಯಾಲಯ, ಹಿಮಾಲಯ ಯೋಗ ಫೌಂಡೇಷನ್, ಮೈಸೂರು ಯೋಗ ಶಿಕ್ಷಣ, ಮಾರುತಿ ಯುವ ಕೇಂದ್ರ, ಜಿಎಸ್‌ಎಸ್ ಯೋಗ ಫೌಂಡೇಷನ್, ಭಾರತ್ ಸ್ವಾಭಿಮಾನಿ ಟ್ರಸ್ಟ್, ಬಾಬಾ ರಾಮದೇವ್ ಯೋಗ, ಪತಂಜಲಿ ಸೇರಿದಂತೆ ನೂರಾರು ಯೋಗ ಕೇಂದ್ರಗಳಿದ್ದು, ಯೋಗ ಪ್ರಚಾರ ಮಾಡುತ್ತಿವೆ.
ಕರೊನಾ ಬರುವುದಕ್ಕೂ ಮುನ್ನ ಮೈಸೂರಿನಲ್ಲಿ 2000 ವಿದೇಶಿಯರು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಜನರು ನಿತ್ಯ ಯೋಗ ಕಲಿಯುತ್ತಿದ್ದರು. ಪ್ರವಾಸೋದ್ಯಮ, ಶಿಕ್ಷಣದ ಜತೆಗೆ ಯೋಗ ಕಲಿಯುವುದಕ್ಕಾಗಿಯೇ ಹೆಚ್ಚು ವಿದೇಶಿಯರು ಮೈಸೂರಿಗೆ ಬರುತ್ತಿದ್ದರು. ಆದರೀಗ ವಿದೇಶಿಗರ ಸಂಖ್ಯೆ ಕಡಿಮೆಯಾಗಿದೆ. ಇಲ್ಲಿನ ಅನೇಕ ಯೋಗಾಪಟುಗಳು ಪ್ರಪಂಚದ ನಾನಾ ಮೂಲೆಗಳಲ್ಲಿ ಯೋಗ ತರಗತಿಗಳನ್ನು ನಡೆಸುತ್ತಿರುವುದು ಮತ್ತೊಂದು ವಿಶೇಷ.
ಮೈಸೂರು ಪ್ರಪಂಚದಲ್ಲೇ ‘ಅಷ್ಟಾಂಗ ವಿನ್ಯಾಸ ಯೋಗ’ದಲ್ಲಿ ಹೆಚ್ಚು ಹೆಸರು ಮಾಡಿದೆ. ಇಲ್ಲಿ ಅಪಾರ ಅನುಭವಿ ಯೋಗ ಶಿಕ್ಷಕರು, ಯೋಗಪಟುಗಳು ಇದ್ದು, ವರ್ಷಪೂರ್ತಿ ಅನೇಕ ರೀತಿಯ ಯೋಗ ಸ್ಪರ್ಧೆಗಳು, ಯೋಗ ಶಿಬಿರಗಳು, ಯೋಗ ತರಗತಿಗಳು ನಡೆಯುತ್ತಲೇ ಇರುತ್ತವೆ. ನಗರದ ಅನೇಕ ಯೋಗಾಪಟುಗಳು ಚೀನಾ, ಜಪಾನ್, ಅಮೆರಿಕ ಸೇರಿದಂತೆ ಪ್ರಪಂಚದಾದ್ಯಂತ ಯೋಗ ಕಲಿಸುತ್ತಿದ್ದಾರೆ. ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಪ್ರಾಬಲ್ಯ ಮೆರೆದ ಯೋಗಪಟುಗಳಾದ ನಂಜನಗೂಡು ಮಹೇಂದ್ರ, ಶ್ರೀಕಂಠ, ಕಿರಣ್, ಸುಷ್ಮಿತಾ, ಸುರೇಶ್, ವಿಕ್ರಂ, ಭಾಗ್ಯಾ, ಪ್ರೇಮಾ, ಜನಾರ್ದನ್, ಖುಷಿ ಸೇರಿದಂತೆ ಅಪಾರ ಪ್ರತಿಭೆಗಳೂ ಇದ್ದಾರೆ.
ಮೈಸೂರಿನಲ್ಲಿ ಯೋಗ ಮುನ್ನೆಲೆಗೆ ಬರಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣ. ಕೃಷ್ಣಮಾಚಾರ್ಯರ ನೇರ ಶಿಷ್ಯರಾದ ಬಿಕೆಎಸ್ ಅಯ್ಯಂಗಾರ್, ಪಟ್ಟಾಭಿ ಜೋಯಿಸ್ ಮತ್ತು ಬಿಎನ್‌ಎಸ್ ಅಯ್ಯಂಗಾರ್ ‘ಅಷ್ಟಾಂಗ ವಿನ್ಯಾಸ ಯೋಗ’ವನ್ನು ವಿಶ್ವಾದ್ಯಂತ ಪ್ರಚುರಪಡಿಸಿದ್ದಾರೆ. ಜಿಲ್ಲಾಡಳಿತ, ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ನಗರದ ವಿವಿಧ ಯೋಗ ಸಂಸ್ಥೆಗಳು ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿವೆ. ಈ ಸಂಬಂಧ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 12 ಸಾವಿರ ಜನರು ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಪಾಲ್ಗೊಳ್ಳಲಿದ್ದಾರೆ.ಡಾ.ಪಿ.ಎನ್. ಗಣೇಶ್‌ಕುಮಾರ್, ಕಾರ್ಯದರ್ಶಿ, ಯೋಗ ಫೆಡರೇಷನ್ ಆಫ್ ಮೈಸೂರು