ವಿಶ್ವಮಾನ್ಯ ಬಾಬಾ ಸಾಹೇಬ್ ಅಂಬೇಡ್ಕರ್ ಪುಸ್ತಕ ಬಿಡುಗಡೆ

21
Published on

ಮೈಸೂರು: ಮೈಸೂರು ವಿಶ್ವವಿದ್ಯಾಲಯ ಸಂಶೋಧನಕರ ಸಂಘ, ಎಲ್ಲ ವಿದ್ಯಾರ್ಥಿ, ಪ್ರಗತಿಪರ ಸಂಘಟನೆಗಳಿಂದ ಮಾನಸಗಂಗೋತ್ರಿಯಲ್ಲಿ ಭಾನುವಾರ ಆಯೋಜಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಪ್ರೊ.ಬಿ.ಪಿ.ಮಹೇಶ್‌ಚಂದ್ರಗುರು ಅವರು ರಚಿಸಿದ ‘ವಿಶ್ವಮಾನ್ಯ ಬಾಬಾ ಸಾಹೇಬ್ ಅಂಬೇಡ್ಕರ್’ ಪುಸ್ತಕ ಬಿಡುಗಡೆ ಮಾಡಲಾಯಿತು.
ಪುಸ್ತಕ ಬಿಡುಗಡೆಗೊಳಿಸಿದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಸಂವಿಧಾನದಂತೆ ಪ್ರತಿಯೊಬ್ಬರಿಗೂ ಸಮಾನತೆ ದೊರೆಯಬೇಕೆಂಬ ಮಹಾದಾಸೆ ಹೊಂದಿದ್ದ ಪ್ರೊ.ಬಿ.ಪಿ.ಮಹೇಶ್‌ಚಂದ್ರಗುರು ಅವರು ವೈಚಾರಿಕ ಪ್ರಜ್ಞೆಯ ಚಿಂತಕ ಎಂದು ಬಣ್ಣಿಸಿದರು.
ವಿದ್ಯಾಭ್ಯಾಸದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಮನಗಂಡಿದ್ದ ಅವರು, ದಲಿತ ವಿದ್ಯಾರ್ಥಿಗಳು ವಿದ್ಯಾವಂತರಾಗುವಂತೆ ಪ್ರೇರೇಪಿಸುತ್ತಿದ್ದರು. ಸೌಲಭ್ಯ ವಂಚಿತ ದಲಿತರಯ ಒಗ್ಗಟ್ಟಾಗಿ ಹಕ್ಕು ಪಡೆಯುವಂತೆ, ಅಂತಹ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ಜನಪ್ರತಿನಿಧಿಗಳಿಗೆ ಸಲಹೆ ನೀಡುತ್ತಿದ್ದರು ಎಂದರು.
ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ಯಾವ ಧರ್ಮದಲ್ಲಿಯೂ ಇಲ್ಲದ ಅಸಮಾನತೆ, ತಾರತಮ್ಯ ನಮ್ಮ ಹಿಂದು ಧರ್ಮದಲ್ಲಿದ್ದು, ಕೊಳಕು ಜಾತಿ ವ್ಯವಸ್ಥೆ ನಮ್ಮಲ್ಲಿ ಇದೆ. ಅದನ್ನು ಹೋಗಲಾಡಿಸಬೇಕೆಂಬ ಗಾಢ ಚಿಂತನೆಯಿಂದ ಅವರು ಸಾಕಷ್ಟು ಶ್ರಮಪಡುತ್ತಿದ್ದರು ಎಂದು ಹೇಳಿದರು.
ಡಾ.ಬಿ. ಆರ್.ಅಂಬೇಡ್ಕರ್ ಇಲ್ಲದಿದ್ದರೆ ಬಹುಶಃ ನಮ್ಮ ದೇಶ ಹಾಳಾಗುತ್ತಿತ್ತು. ನಮ್ಮ ಯುವ ಸಮುದಾಯ ಅಂಬೇಡ್ಕರ್ ಪುಸ್ತಕಗಳನ್ನು ಓದಬೇಕು. ಆಗ ದೇಶದ ಸ್ಥಿತಿ ತಿಳಿದುಕೊಳ್ಳಲು ಸಾಧ್ಯ. ಇಲ್ಲವಾದಲ್ಲಿ ಸಂಘಟಿಸಲು ಆಗುವುದಿಲ್ಲ ಎಂದರು.
ಉರಿಲಿಂಗಪೆದ್ದಿಮಠದ ಶ್ರೀಜ್ಞಾನ ಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಮೇಯರ್ ಪುರುಷೋತ್ತಮ್, ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಎನ್. ನಾಗರಾಜು, ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ. ಡಿ. ಆನಂದ್, ಪ್ರಸಾರಂಗ ವಿಭಾಗದ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು, ಪತ್ರಕರ್ತ ಕೆ.ಶಿವಕುಮಾರ್, ಪ್ರೊ ಸಿ. ಹೇಮಾವತಿ ಸಂಶೋಧಕ ಸಂಘದ ಅಧ್ಯಕ್ಷ ಶಿವಶಂಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net