

ಮಂಡ್ಯ: ಗಾಳಿ, ಬೆಳಕು ಮತ್ತು ನೀರು ಮನುಷ್ಯನಿಗೆ ಜೀವ ನೀಡಿದೆ. ಈ ಋಣ ತೀರಿಸಬೇಕಾದರೆ ಪರಿಸರವನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಬೇಕಿದೆ ಎಂದು ಪ್ಲಾಸ್ಟಿಕ್ ವಿರೋಧಿ ಪರಿಸರ ಮಿತ್ರ ಜಯಶಂಕರ ಹೇಳಿದರು.
ತಾಲೂಕಿನ ದುದ್ದ ಹೋಬಳಿ ಚಂದಗಾಲು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಜಾಥಾದಲ್ಲಿ ಮಾತನಾಡಿದ ಅವರು, ಪರಿಸರ ಉಳಿಸುವ ಮೂಲಕ ಸಕಲ ಜೀವರಾಶಿಯನ್ನು ಸಂರಕ್ಷಿಸುವ ಸಂಕಲ್ಪ ಮಾಡೋಣ. ಪ್ರಸ್ತುತ ಸನ್ನಿವೇಶದಲ್ಲಿ ಶಾಲಾ ಕಾಲೇಜು ಮಕ್ಕಳಿಗೆ ಪರಿಸರದ ಜಾಗೃತಿಯ ಕುರಿತು ಅರಿವು ಮೂಡಿಸುವ ಅಗತ್ಯವಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಾಣ ಮಾಡಲು ಜಲ, ವಾಯು ಮತ್ತು ಶಬ್ದ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ಸಹಕಾರ ನೀಡೋಣ ಎಂದು ಕರೆ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಹೇಮರಾಜ, ಪ್ರೌಢಶಾಲೆ ಮುಖ್ಯಶಿಕ್ಷಕಿ ಜಯಶೀಲಾ, ಬಿ.ಹೊಸೂರು ರಾಜಣ್ಣ ಇತರರಿದ್ದರು. ವಿಶ್ವ ಪರಿಸರ ದಿನದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು.