ಪ್ರಕೃತಿದತ್ತ ಸೌಲಭ್ಯದ ರಕ್ಷಣೆ ಅಗತ್ಯ: ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಹೇಳಿಕೆ

World Environment Day Mandya
Published on

ಮಂಡ್ಯ: ಪ್ರಕೃತಿದತ್ತವಾಗಿ ಬಂದಿರುವ ಭೂಮಿ, ಗಾಳಿ, ನೀರು, ಅರಣ್ಯವನ್ನು ಸಂರಕ್ಷಿಸಬೇಕಿದೆ ಎಂದು ರಾಜ್ಯ ಆಹಾರ ಆಯೋಗ ಅಧ್ಯಕ್ಷ ಡಾ.ಎಚ್.ಕೃಷ್ಣ ಹೇಳಿದರು.

ನಗರದ ಡಿಎಚ್‌ಒ ಕಚೇರಿ ಆವರಣದಲ್ಲಿ ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರ ಸಂಘದಿಂದ ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಟ್ಟು ಮಾತನಾಡಿದ ಅವರು, ಪ್ರತಿಯೊಬ್ಬರಲ್ಲೂ ಪರಿಸರ ಪ್ರಜ್ಞೆ ಜತೆಗೆ ಸಂರಕ್ಷಣೆ ಜವಾಬ್ದಾರಿ ಅತ್ಯವಶ್ಯಕವಾಗಿರಬೇಕು. ನಾಗರಿಕ ಸಮಾಜ ಎಷ್ಟು ಪ್ರಗತಿ ಕಂಡರೂ ಪ್ರಕೃತಿ ವಿರೋದಿ ಕೃತ್ಯ ಎಸಗಬಾರದು. ಅತಿಯಾದರೆ ವಿಕೋಪ ಕಟ್ಟಿಟ್ಟ ಬುತ್ತಿಯಾಗುತ್ತದೆ. ಪ್ರಪಂಚದ 143 ದೇಶಗಳು ವಿಶ್ವ ಪರಿಸರ ದಿನವನ್ನು ಆಚರಿಸುತ್ತಿವೆ. ನಮ್ಮೆಲ್ಲರ ರಕ್ಷಣೆ ಮಾಡುತ್ತಿರುವ ಪ್ರಕೃತಿಯನ್ನು ನಾವು ಉಳಿಸಿ ಬೆಳೆಸಬೇಕಿದೆ. ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸಸಿಗಳನ್ನು ನೆಟ್ಟು ಮುಂದಿನ ಪೀಳಿಗೆಗೆ ಹಸಿರು ಸಂಪತ್ತನ್ನು ಕೊಡಗೆಯಾಗಿ ನೀಡಬೇಕಿದೆ ಎಂದು ತಿಳಿಸಿದರು.

ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರ ಸಂಘದ ಅಧ್ಯಕ್ಷೆ ಡಾ.ವಸಂತಲಕ್ಷ್ಮೀ ಮಾತನಾಡಿ, ಗಿಡ ನೆಡುವುದರ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದ್ದೇವೆ. ಪರಿಸರ ಕಾಳಜಿ ಎಲ್ಲರಲ್ಲೂ ಇರಬೇಕು. ಪ್ರಕೃತಿಯಿಂದ ಜೀವರಾಶಿಗಳು ಜೀವಂತವಾಗಿವೆ. ತಂಪು ತಂಗಾಳಿಗಾಗಿ ಮರ ಗಿಡಗಳು ಅತ್ಯಾವಶ್ಯಕ. ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಭೂ ತಾಪಮಾನ ಹೆಚ್ಚಾಗುತ್ತಿದೆ. ಪ್ರಕೃತಿ ಸಂಪತ್ತು ವಿನಾಶವಾಗುತ್ತಿದೆ. ಮನುಷ್ಯನಿಂದ ಮಾತ್ರ ಪ್ರಕೃತಿಗೆ ಧಕ್ಕೆಯಾಗುತ್ತದೆ. ಇನ್ನಾದರೂ ಪರಿಸರ ಆರೋಗ್ಯ ಹೆಚ್ಚಿಸಲು ಎಲ್ಲರೂ ಕೈಜೋಡಿಸೋಣ. ಎಷ್ಟೇ ಅಭಿವೃದ್ದಿ ಹೊಂದಿದ್ದರೂ ನಾವು ಪ್ರಕೃತಿ ವಿರುದ್ಧವಾಗಿ ಹೋಗಲು ಸಾಧ್ಯವಿಲ್ಲ. ಪ್ರಕೃತಿಯನ್ನು ಪೋಷಿಸುತ್ತಲೇ ನಾವು ಜೀವಿಸಬೇಕು. ಪರಿಸರ ಉಳಿದರೆ ಮಾತ್ರ ಜೀವಸಂತತಿ ಉಳಿಯುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ಡಾ.ವಸುಮತಿರಾವ್, ಡಾ.ಶೀಲಾ, ಡಾ.ಬಿ.ಕೆ.ಸುರೇಶ್, ಡಾ.ಸವಿತಾ, ಡಾ.ಶೋಭಾರಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net