

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಪರಿಸರ ನಾಶದಿಂದಾಗಿ, ತಾಪಮಾನದ ಏರಿಕೆ ಮಾತ್ರವಲ್ಲ ಕಾಡಿನಲ್ಲಿನ ಪ್ರಾಣಿಗಳನ್ನು ನಾಡಿನಲ್ಲಿ ಕಾಣುತ್ತಿದ್ದೇವೆ. ನಾವು ಈಗ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಭೂಮಿಯಲ್ಲಿ ಜೀವಿಸಲು ಕಷ್ಟವಾಗಬಹುದು ಎಂದು ರತ್ನಮಾನಸ ವಿದ್ಯಾರ್ಥಿ ನಿಲಯದ ನಿಲಯಪಾಲಕ ಯತೀಶ್ ಕೆ.ಬಳಂಜ ಹೇಳಿದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ(ಬಿ.ಎಡ್)ದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗಿನ ಕಾಲದಲ್ಲಿ ಗಿಡ ನೆಡುವುದು ಕೇವಲ ಪರಿಸರ ದಿನಾಚರಣೆಗೆ ಸೀಮಿತವಾಗಿದೆ. ವಿವಿಧ ರೀತಿಯ ಆಶ್ರಯ ನೀಡುವ ಆರೋಗ್ಯಕರ ಹಣ್ಣಿನ ಮರಗಳ ಸಂಖ್ಯೆ ಕಡಿಮೆಯಾಗಿದೆ. ಪರಿಸರ ನಾಶಕ್ಕೆ ಮುಖ್ಯ ಕಾರಣ ಅನಕ್ಷರಸ್ಥರು ಅಲ್ಲ. ಅಕ್ಷರಸ್ಥರ ಅಹಂಕಾರ. ನಮಗೆ ಪುಸ್ತಕ ಮಾತ್ರ ಪ್ರಪಂಚವಲ್ಲ. ಪರಿಸರವನ್ನು ಓದಬೇಕು, ಅಭ್ಯಾಸ ಮಾಡಬೇಕು ಎಂದರು.
ಪ್ರಾಂಶುಪಾಲ ಸಂತೋಷ್ ಆಲ್ಬರ್ಟ್ ಸಾಲ್ಡಾನ ಅಧ್ಯಕ್ಷತೆ ವಹಿಸಿ ಮಾತನಾಡಿ, ಅತಿ ಹೆಚ್ಚು ಉಪಯೋಗಕ್ಕೆ ಬರುವ ಗಿಡಗಳನ್ನು ನೆಟ್ಟರೆ ಇರುವ ಒಂದೇ ಭೂಮಿಯನ್ನು ಸ್ವರ್ಗ ಮಾಡಬಹುದು. ನಮ್ಮಿಂದ ಗಿಡ-ಮರ ಬೆಳೆಯಬೇಕು. ಮರಗಳಿಗೂ ಮಾನವರಿಗೂ ಸಂಪರ್ಕವಿರಬೇಕು ಎಂದರು.
ಉಪನ್ಯಾಸಕರಾದ ತಿರುಮಲೇಶ್ ರಾವ್ ಎನ್.ಕೆ, ವಿದ್ಯಾಶ್ರೀ ಪಿ, ಅನುಷಾ ಡಿ.ಜೆ, ಚೈತ್ರಾ, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ವಿಶಾಲ ಸ್ವಾಗತಿಸಿದರು. ದಿವ್ಯ ಕೆ.ಎಸ್ ವಂದಿಸಿದರು. ರಾಫಿಯಾ ಅತಿಥಿ ಪರಿಚಯಿಸಿದರು. ರಶ್ಮಿ ಕಾರ್ಯಕ್ರಮ ನಿರೂಪಿಸಿದರು.