

ಬಸವಕಲ್ಯಾಣ: ಪರಿಸರದ ಮಡಿಲಿನಲ್ಲಿ ಬದುಕಲು ಎಲ್ಲ ಜೀವಜಾಲಕ್ಕೂ ಹಕ್ಕಿದೆ. ಅದರ ಮೇಲೆ ನಡೆಸುವ ದೌರ್ಜನ್ಯ ಕಾನೂನು ವಿರೋಧಿಯಾಗಿದೆ. ಪರಿಸರ ಎಲ್ಲ ಜೀವದ ಜೀವಾಳವಾಗಿದೆ. ಮರಗಳು ನೆಡುವ ಮೂಲಕ ಪರಿಸರ ಸಂರಕ್ಷಿಸಬೇಕಾಗಿದೆ ಎಂದು ಅರಣ್ಯ ಇಲಾಖೆಯ ಉಪ ವಲಯ ಅಧಿಕಾರಿ ಸಂತೋಷಕುಮಾರ ಯಾಚೆ ಹೇಳಿದರು.
ನಗರದ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಅರಣ್ಯಇಲಾಖೆ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ಸಸಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಗಿಡ ಮರಗಳು ಇದ್ದಿದ್ದರೆ ಇಡೀ ಜಗತ್ತು ಸುಖವಾಗಿರಲು ಸಾಧ್ಯ ಎಂದರು.
ಪ್ರಾಣಿ, ಪಕ್ಷಿ, ಸೂಕ್ಷ್ಮ ಜೀವಿಗಳಿಂದ ಹಿಡಿದು ಎಲ್ಲರಿಗೂ ತಾಣವಾಗಿರುವ ಕಾಡು ಉಳಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಕಾಡು ಅಳಿದು ಹೋದರೆ ಮನುಷ್ಯನಿಗೆ ಅಸ್ತಿತ್ವವಿಲ್ಲ, ಕಾಡು ಇಲ್ಲದೆ ಯಾವ ಜೀವಿಯೂ ಉಳಿಯುವುದಿಲ್ಲ ಎಂದರು.
ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ನೀರು, ಗಾಳಿ, ಬೆಳಕು ಪ್ರಕೃತಿಯ ಬಹುದೊಡ್ಡ ಸಂಪತ್ತು. ಮನುಷ್ಯನ ದುರಾಸೆಯಿಂದ ಪ್ರಾಕೃತಿಕ ಹಲ್ಲೆ, ಅರಣ್ಯ ನಾಶ, ನೀರಿನ ಅಶುದ್ಧತೆಗೆ ಕಾರಣವಾಗಿದೆ ಎಂದರು.
ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಬಿಡಿಪಿಸಿ ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಸಹಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ಮಂಠಾಳ ಉಪ ವಲಯ ಅರಣ್ಯಾಧಿಕಾರಿ ನಿಸಾರ್, ಉಪನ್ಯಾಸಕರಾದ ಶ್ರೀನಿವಾಸ ಉಮಾಪುರೆ, ಸಂಗೀತಾ ಮಹಾಗಾಂವೆ, ಗಂಗಾಧರ ಸಾಲಿಮಠ, ಚನ್ನಬಸಪ್ಪ ಗೌರ, ಗುರುದೇವಿ ಕಿಚಡೆ, ಜಗದೇವಿ ಜವಳಗೆ, ಪವನ ಪಾಟೀಲ್, ಖದಿಜಾ ತಬಸ್ಸುಮ್ ಇತರರಿದ್ದರು.
ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿವಿಧ ಸಸಿ ವಿತರಿಸಲಾಯಿತು. ಪ್ರಾಚಾರ್ಯೆ ಡಾ. ಶಾಂತಲಾ ಪಾಟೀಲ್ ಸ್ವಾಗತಿಸಿದರು. ಡಾ.ಬಸವರಾಜ ಖಂಡಾಳೆ ನಿರೂಪಣೆ ಮಾಡಿದರು. ಸಚಿನ ಬಿಡವೆ ವಂದಿಸಿದರು.