

ಬೆಳ್ತಂಗಡಿ : ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಸದಾಶಿವರುದ್ರ ದೇವಸ್ಥಾನದ ವಠಾರದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಬೆಳ್ತಂಗಡಿ ವಲಯ ಹಾಗೂ ಸುರ್ಯ ದೇವಸ್ಥಾನದ ಆಶ್ರಯದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಸುರ್ಯ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಡಾ. ಸತೀಶ್ಚಂದ್ರ ಸುರ್ಯಗುತ್ತು ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಡಾ.ಸತೀಶ್ಚಂದ್ರ ಹಾಗೂ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ವಿದ್ಯಾ ಪಿ. ಡಿ. ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಅರಣ್ಯೀಕರಣದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಅರಣ್ಯಾಧಿಕಾರಿ ಅಶೋಕ್, ಇಲಾಖೆ ಸಿಬ್ಬಂದಿ ಶೇಖರ ಗೌಡ, ನಡ ಪಂಚಾಯತ್ ಮಾಜಿ ಅಧ್ಯಕ್ಷ ಮುನಿರಾಜ ಅಜ್ರಿ, ಪ್ರಸಾದ್, ಸುಂದರ ನಾಯ್ಕ, ಪದ್ಮನಾಭ ಗೌಡ, ಯೋಗೀಶ್ ಪೂಜಾರಿ ಹಾಜರಿದ್ದರು. ಮಾವು, ಹೆಬ್ಬಲಸು, ಸಂಪಿಗೆ, ನೇರಳೆ, ಶ್ರೀಗಂಧ, ಸೊರಗೆ, ಹೊಳೆ ದಾಸವಾಳ ಇತ್ಯಾದಿ ನೂರು ಗಿಡಗಳನ್ನು ಸುರ್ಯ ದೇವಸ್ಥಾನದ ವಠಾರದಲ್ಲಿ ನೆಡಲಾಯಿತು.