

ಬೆಂಗಳೂರು: ಜೀವ ಸಂಕುಲಗಳ ಬದುಕಿನ ಭಾಗವಾಗಿರುವ ಹಸಿರನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಶಾಲೆಗಳ ಜತೆಗೆ ಒಪ್ಪಂದ ಮಾಡಿಕೊಂಡು 2 ಲಕ್ಷ ಗಿಡಗಳನ್ನು ನೆಡುವ ‘ಹಸಿರು ರಕ್ಷಕ’ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಕಬ್ಬನ್ ಉದ್ಯಾನದ ಬಾಲ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಬ್ರ್ಯಾಂಡ್ ಬೆಂಗಳೂರು ಹಸಿರುಕರಣ’ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಗಿಡ ನೆಟ್ಟರೆ ಮರ, ಮರದಿಂದ ಮಳೆ, ಮಳೆಯಿಂದ ನೀರು, ನೀರು ಇದ್ದರೆ ನಾವು ನೀವು ಎಂಬುದನ್ನು ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳಬೇಕು. ತಂದೆ, ತಾಯಿ ಮಕ್ಕಳನ್ನು ಸಾಕಿದಂತೆ ಶಾಲಾ ಮಕ್ಕಳು ತಾವು ನೆಟ್ಟ ಗಿಡಗಳನ್ನು ಆರೈಕೆ ಮಾಡಬೇಕು. ಕಳೆದ ವರ್ಷ ಶಾಲಾ ಮಕ್ಕಳೇ 52 ಸಾವಿರ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಅದೇ ರೀತಿ ಈ ವರ್ಷವೂ ಒಬ್ಬೊಬ್ಬ ವಿದ್ಯಾರ್ಥಿ ಒಂದೊಂದು ಗಿಡ ನೆಟ್ಟು ಬೆಳೆಸಬೇಕು ಎಂದರು.
ಇಂದು ಬೆಂಗಳೂರು ಇಷ್ಟರಮಟ್ಟಿಗೆ ಬೆಳೆಯುತ್ತದೆ ಎಂದು ನಾಡಪ್ರಭು ಕೆಂಪೇಗೌಡರು ತಿಳಿದಿರಲಿಲ್ಲ. ಹಿರಿಯರು ಬೆಂಗಳೂರನ್ನು ಹಸಿರಿನಿಂದ ಕಂಗೊಳಿಸಿದ್ದರು. ಇದನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಆರೋಗ್ಯ, ಶಿಕ್ಷಣ, ಕೈಗಾರಿಕೆ, ಉದ್ದಿಮೆ ಸೇರಿ ಅನೇಕ ಕ್ಷೇತ್ರಗಳಲ್ಲಿ ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಇದರ ಜೊತೆ ಜೊತೆಗೆ ಪ್ರಕೃತಿಯನ್ನೂ ಬೆಳೆಸಬೇಕಿದೆ. ಈ ಕಾರಣಕ್ಕಾಗಿಯೇ ‘ಹಸಿರು ರಕ್ಷಕ’ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
ಹಸಿರು ಸಂರಕ್ಷಣೆಗೆ 410 ಕೋಟಿ ರೂ.: ಕಳೆದ ವರ್ಷ ಮಳೆ ಬರದೆ 200ಕ್ಕೂ ಹೆಚ್ಚು ತಾಲೂಕುಗಳು ಬರ ಎದುರಿಸಬೇಕಾಯಿತು. ಬೆಂಗಳೂರಿನಲ್ಲಿ ನೀರಿನ ಕೊರತೆ ಉಂಟಾಯಿತು. ಇಂತಹ ಪರಿಸ್ಥಿತಿಗಳು ಮತ್ತೆ ಬಾರದಂತೆ ಜಾಗೃತರಾಗಬೇಕು. ಬೇಸಿಗೆಯಲ್ಲಿ ಬೆಂಗಳೂರಿನ ಉಷ್ಣಾಂಶ 36 ಡಿ.ಸೆ. ದಾಟಿದೆ. ಬೆಂಗಳೂರಿನ ಹಸಿರನ್ನು ಉಳಿಸಲು ಅನೇಕ ಸ್ವಯಂ ಸೇವಾ ಸಂಘಗಳು ಕೆಲಸ ಮಾಡುತ್ತಿವೆ. ಬೆಂಗಳೂರಿನ ಹಸಿರು ಸಂರಕ್ಷಣೆಗೆ ವಿವಿಧ ಇಲಾಖೆಗಳಡಿ 310 ಕೋಟಿ ರೂ. ಹಾಗೂ 15ನೇ ಹಣಕಾಸು ಆಯೋಗದಡಿ 100 ಕೋಟಿ ರೂ. ಸೇರಿ ಒಟ್ಟು 410 ಕೋಟಿ ರೂ. ಮೀಸಲಿಡಲಾಗಿದೆ ಎಂದು ಡಿಸಿಎಂ ಹೇಳಿದರು.
ಪ್ಲಾಸ್ಟಿಕ್ ಗಿಡಗಳ ಮೊರೆ: ಹಸಿರು ಎಷ್ಟು ಮಹತ್ವ ಪಡೆದುಕೊಂಡಿದೆ ಎಂದರೆ, ನಗರ ಪ್ರದೇಶಗಳಲ್ಲಿನ ಮಧ್ಯಮ ವರ್ಗದ ಜನರು ಮನೆಯಲ್ಲಿ ಹಸಿರು ಇರಬೇಕು ಎಂದು ಪ್ಲಾಸ್ಟಿಕ್ ಗಿಡಗಳನ್ನು ಇಟ್ಟುಕೊಂಡಿರುತ್ತಾರೆ. ಮನಿ ಪ್ಲಾಂಟ್ ಅನ್ನು ಬಾಟಲ್ಗಳಲ್ಲಿ ಬೆಳೆಸುತ್ತಾರೆ. ಅಂದರೆ ಹಸಿರಿನ ಮಧ್ಯೆ ಬದುಕ ಬೇಕು ಎಂಬುದು ಎಲ್ಲರ ಅಭಿಲಾಷೆ. ಆ ಪ್ಲಾಸ್ಟಿಕ್ ಗಿಡಗಳ ಮೊರೆ ಹೋಗುವ ಬದಲು ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಉಸಿರಾಗಿಸುವ ಹಸಿರನ್ನು ಬೆಳೆಸೋಣ. ಈ ನಿಟ್ಟಿನಲ್ಲಿ ಪಾಲಕರು ಮಕ್ಕಳನ್ನು ಸಾಕುವಂತೆ ಶಾಲಾ ಮಕ್ಕಳು ತಾವು ನೆಡುವ ಗಿಡಗಳನ್ನು ಆರೈಕೆ ಮಾಡಬೇಕು. ಆ ಮೂಲಕ ಮಕ್ಕಳಿಂದ ಪ್ರಕೃತಿಯನ್ನು ಬೆಳೆಸಿ ಉಳಿಸೋಣ ಎಂದ ಅವರು, ಮಕ್ಕಳ ನೆನಪಿನ ಶಕ್ತಿ ಹಾಗೂ ಆಲೋಚನಾ ಕ್ರಮಗಳ ಕುರಿತು ಮಾತನಾಡುತ್ತ ವೇದಿಕೆಯಲ್ಲಿ ಮಕ್ಕಳಿದ್ದರೆ ಚೆನ್ನ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯೆಗೆ ಅಂತಸ್ತಿಲ್ಲ: ಶಿಕ್ಷಣದಲ್ಲಿ ಇಂದು ಬಹಳಷ್ಟು ಬದಲಾವಣೆ ಆಗಿದೆ. ಹಣವಂತರು, ಅಧಿಕಾರಿಗಳ ಮಕ್ಕಳೇ ಓದಬೇಕು ಎನ್ನುವ ಹಾಗಿಲ್ಲ. ಬಾಗಲಕೋಟೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ 625ಕ್ಕೆ 625 ಅಂಕಗಳನ್ನು ಗಳಿಸಿದ್ದಾಳೆ. ವಿದ್ಯೆಗೆ ಅಂತಸ್ತಿಲ್ಲ ಎಂಬುದಕ್ಕೆ ಇದೇ ಸಾಕ್ಷಿ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ಬೆಂಗಳೂರಿನ ಮಕ್ಕಳಿಗೆ ಕವಲುದಾರಿಗಳು ಹೆಚ್ಚು. ಆದರೆ ಗ್ರಾಮೀಣ ಭಾಗದ ಮಕ್ಕಳಿಗೆ ಹಾಗಿಲ್ಲ. ಆದ್ದರಿಂದ ಅವರು ಓದಿನಲ್ಲಿ ಮುಂದಿದ್ದಾರೆ. ಈ ಕಾರಣಕ್ಕೆ ಗ್ರಾಮೀಣ ಭಾಗದಲ್ಲಿ 2 ಸಾವಿರ ಪಬ್ಲಿಕ್ ಶಾಲೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದರು.
ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಪರಿಸರ ಚೆನ್ನಾಗಿದ್ದರೆ ಮಾತ್ರ ಗುಣಮಟ್ಟದ ಜೀವನ ನಡೆಸಬಹುದಾಗಿದೆ. ಅದಕ್ಕೆ ನಾವು ಪರಿಸರ ಕಾಪಾಡುವ ಕೆಲಸ ಮಾಡಬೇಕಾಗಿದೆ. ಕೈಗಾರಿಕೆ ಮತ್ತು ಅಭಿವೃದ್ಧಿಯೇ ಮುಖ್ಯ ಎಂದು ಭಾವಿಸಿ ಪರಿಸರದ ಮಹತ್ವವನ್ನು ಮರೆಯುತ್ತಿದ್ದೇವೆ. ಇದರಿಂದ ಹವಾಮಾನ ವೈಪರೀತ್ಯ, ಬರದಂತಹ ಸಂಕಷ್ಟ ಪರಿಸ್ಥಿತಿ ಎದುರಿಸಬೇಕಾಗಿದೆ. ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಲ್ಲಸಬೇಕು. ಪರಿಸರದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಈ ನಿಟ್ಟಿನಲ್ಲಿ ಇಂದು ಶಾಲಾ ಮಕ್ಕಳೇ ಉತ್ತಮ ಪರಿಸರ ರಾಯಬಾರಿಗಳಾಗಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹಸನಬ್ಬ, ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್, ಡಿಸಿಎಂ ವಿಶೇಷ ಅಧಿಕಾರಿ ರಾಜೇಂದ್ರ ಚೋಳನ್ ಇತರರಿದ್ದರು.