

ಜಮಖಂಡಿ: ಮನೆಗೆ ತಂದ ಹಣ್ಣಿನಲ್ಲಿನ ಬೀಜಗಳನ್ನು ಕಸದ ತೊಟ್ಟಿಗೆ ಎಸೆದು ಹಾಳು ಮಾಡದೆ ಅವುಗಳನ್ನು ಸಂಗ್ರಹಿಸಿ ಅರಣ್ಯ ಇಲಾಖೆಗೆ ನೀಡುವ ಮೂಲಕ ಅರ್ಥಪೂರ್ಣವಾಗಿ ವಿಶ್ವ ಪರಿಸರ ದಿನ ಆಚರಿಸಲಾಯಿತು.
ನಗರದ ಜ್ಯೋತಿ ವಿಜಯ ಕಟಗಿ ಅವರ ಪರಿಕಲ್ಪನೆಯಿಂದ ಸ್ನೇಹಾ ಮಹಿಳಾ ಮಂಡಳ, ಸಾವಿತ್ರಿಬಾಯಿ ಫುಲೆ, ಗೌರಿ ಗಣೇಶ ಮಹಿಳಾ ಮಂಡಳ, ಹೇಮರಡ್ಡಿ ಮಲ್ಲಮ್ಮ ಸಂಘ ಸೇರಿ ನಗರದ ಮಹಿಳೆಯರು ಗಿವಿಂಗ್ ಆ್ಯಂಡ್ ಗ್ರೋವಿಂಗ್ (ಕೊಡುವುದರ ಮೂಲಕ ಬೆಳೆಸುವುದು) ಯೋಜನೆಗೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಅಂದಾಜು ಎರಡು ತಿಂಗಳಿನಿಂದ ನಗರದ ಮಹಿಳೆಯರು ತಮ್ಮ ಮನೆಗೆ ತಂದಿದ್ದ ಹಲಸಿನ ಹಣ್ಣು, ಮಾವಿನ ಹಣ್ಣು, ಚಿಕ್ಕು, ಪಪ್ಪಾಯಿ, ನೆರಳೆ ಹಣ್ಣು ಸೇರಿ ಒಟ್ಟು 2 ಸಾವಿರ ಹಣ್ಣಿನ ಬೀಜಗಳನ್ನು ಸಂಗ್ರಹಿಸಿದ್ದು ವಿಶೇಷ.
ನಗರದಲ್ಲಿ ಹಣ್ಣಿನ ಬೀಜಗಳು ಹಾಳಾಗಬಾರದು. ಮಳೆಗಾಲದಲ್ಲಿ ಅರಣ್ಯ ಇಲಾಖೆಯವರಿಗೆ ನೀಡಿದರೆ ಅವರು ಅವುಗಳನ್ನು ಸಸಿಗಳನ್ನಾಗಿ ಬೆಳೆಸಿ ಜನರಿಗೆ ವಿತರಿಸುತ್ತಾರೆಂದು ಮಹಿಳಾ ಸಂಘಟಕರು ಹಣ್ಣಿನ ಬಿಜಗಳನ್ನು ಸಂಗ್ರಹಿಸಿ ವಿಶ್ವ ಪರಿಸರ ದಿನಾಚರಣೆ ದಿನದಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದು ನಾಗರಿಕರ ಪ್ರಶಂಸೆಗೆ ಪಾತ್ರವಾಗಿದೆ.