

ವಿಜಯಪುರ: ಸುಂದರ ನಿಸರ್ಗವೇ ನಿಜವಾದ ಸ್ವರ್ಗ, ಪರಿಸರ ಉಳಿದರೆ ಮಾತ್ರ ಮನುಕುಲ ಉಳಿಯಲು ಸಾಧ್ಯ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಎಂಬುದನ್ನು ಮುಗ್ದ ಮಕ್ಕಳು ಚಿತ್ರಕಲೆ ಮೂಲಕ ಸಾರಿ ತೋರಿದರು.
ನಗರದ ಹೃದಯ ಭಾಗದಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಆರ್ಟ್ ಗ್ಯಾಲರಿಯಲ್ಲಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ ವಿಶಿಷ್ಟವೂ...ವಿಭಿನ್ನವೂ ಹಾಗೂ ವಿನೂತನವೂ ಆಗಿತ್ತು.
ಪರಿಸರ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ, ಪರಿಸರಿಂದಲೇ ನಮ್ಮ ಉಳಿವು, ಭೂಮಿಯನ್ನು ಸಂರಕ್ಷಿಸಿ, ನೀರು ಉಳಿಸಿ, ಕಾಡು ಬೆಳೆಸಿ-ನಾಡು ಉಳಿಸಿ...ಹೀಗೆ ಹಲವು ಘೋಷವಾಕ್ಯದೊಂದಿಗೆ ಮಕ್ಕಳು ಬಿಡಿಸಿದ ಚಿತ್ರಕಲೆ ಪರಿಸರ ಪ್ರೇಮಿಗಳ ಗಮನ ಸೆಳೆದವು. ನಗರದ ಪ್ರತಿಷ್ಠಿತ ಆಕ್ಸಫರ್ಡ್, ಸಂಗನಬಸವ ಶಿಶುನಿಕೇತನ, ಬಿ.ಎಂ. ಪಾಟೀಲ, ಆಕ್ಟ್ ಶಾರದಾ, ಪ್ರೇರಣಾ, ಶಾಂತಿನಿಕೇತನ, ದರಬಾರ್, ಗಲಗಲಿಯ ನಂದಿ ಇಂಟರ್‌ನ್ಯಾಶನಲ್ ಸ್ಕೂಲ್, ಸಿದ್ಧೇಶ್ವರ ಕೋಚಿಂಗ್ ಕ್ಲಾಸ್, ಎಕ್ಸಲಂಟ್ ಕೋಚಿಂಗ್ ಶಾಲೆ ಮತ್ತು ಕನ್ನಡ ಮಾಧ್ಯಮ ಶಾಲೆ ಹಾಗೂ ಸರ್ಕಾರಿ ಶಾಲೆ ಸೇರಿದಂತೆ ಅನೇಕ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ನೂರಾರು ಮಕ್ಕಳು ಚಿತ್ರಕಲೆ ಮೂಲಕ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.
ಪಾಲಕರು ಹಾಗೂ ಶಾಲೆ ಸಿಬ್ಬಂದಿ ಸಂತಸದಿಂದ ಪಾಲ್ಗೊಂಡಿದ್ದು ಪರಿಸರದ ಕಾಳಜಿಯನ್ನು ಪ್ರದರ್ಶಿಸಿತು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಾಯಿತು. ವಿದ್ಯಾರ್ಥಿಗಳಿಗಾಗಿ ಶುದ್ಧ ಕುಡಿಯುವ ನೀರು ಹಾಗೂ ಬಿಸ್ಕತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಚ್ಚ ಹಸುರಿನ ವಾತಾವರಣದಲ್ಲಿ ಮಕ್ಕಳು ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿದ್ದು, ಬೆಳ್ಳಕ್ಕಿಗಳ ಗುಂಪು ಸೇರಿದಂತೆ ಕಂಗೊಳಿಸುತ್ತಿತ್ತು. ಪರಿಸರ ಉಳಿದರೆ ಮಾತ್ರ ನಾವೆಲ್ಲರೂ ಉಳಿಯಲು ಸಾಧ್ಯ ಎಂಬುದು ಸ್ಪರ್ಧೆಯ ಅಂತಿಮ ಸಂದೇಶವಾಗಿತ್ತು. ಸ್ಪರ್ಧೆಯ ನಂತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಾಡು ಹೇಳಿ ಮನರಂಜಿಸಿದರಲ್ಲದೇ ಪರಿಸರ ಸಂರಕ್ಷಣೆಯ ಸಂದೇಶ ರವಾನಿಸಿದರು.
ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಬಾಲ್ಯದಿಂದಲೇ ಮಕ್ಕಳಿಗೆ ಅರಿವು ಮೂಡಿಸಬೇಕು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾದ್ದರಿಂದ ಭವಿಷ್ಯದಲ್ಲಿ ಸುಂದರ ಪರಿಸರ ನಿರ್ಮಾಣಕ್ಕಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ವಿಜಯವಾಣಿ ಹಮ್ಮಿಕೊಂಡಿರುವ ಕಾರ್ಯಕ್ರಮ ಅರ್ಥಪೂರ್ಣ ಎಂದು ಶ್ಲಾಘಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ನಿರ್ಮಾಣದ ಕನಸು ಕಟ್ಟಿಕೊಂಡಿದ್ದಾರೆ. ಅವರ ಕನಸು ಸಾಕಾರಗೊಳಿಸಲು ಪ್ರತಿಯೊಬ್ಬರೂ ಶ್ರಮಿಸೋಣ ಎಂದರು.
ವಿಜಯಪುರ ಜಿಲ್ಲೆಯ ವಿಶ್ವದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದು. ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುತ್ತಿರುತ್ತಾರೆ. ಹೀಗಾಗಿ ಸುಂದರ ನಗರ ನಿರ್ಮಾಣಕ್ಕೆ ಸರ್ವರೂ ಸಹಕರಿಸಬೇಕು. ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಪ್ರಮುಖ ರಸ್ತೆಗಳಲ್ಲಿ ಕಸ ಎಸೆಯದಂತೆ ಜಾಗರೂಕತೆ ವಹಿಸಬೇಕು. ಇಲ್ಲವಾದಲ್ಲಿ ಪ್ರವಾಸಿಗರ ಎದುರು ಜಿಲ್ಲೆಯ ಮಾನ ಹರಾಜು ಹಾಕಿದಂತಾಗುತ್ತದೆ ಎಂದರು.
ಪ್ರವಾಸಿ ತಾಣಗಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಇಲಾಖೆಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪಾಥ್‌ವೇಗಳನ್ನು ನಿರ್ಮಿಸಲಾಗಿದೆ. ಕಲ್ಲು ಬೆಂಚುಗಳನ್ನು ಇರಿಸಿ ರಸ್ತೆ ಇಕ್ಕೆಲಗಳಲ್ಲಿ ಸುಂದರ ಅಲಂಕೃತ ಸಸಿಗಳನ್ನು ನೆಡಲಾಗಿದೆಯಲ್ಲದೇ ಪ್ರವಾಸಿ ಮಾರ್ಗಸೂಚಿ, ನಾಮಫಲಕ ಅಳವಡಿಸಿ ನಗರದ ಸೌಂದರ್ಯೀಕರಣಕ್ಕೆ ಆದ್ಯತೆ ನೀಡಲಾಗಿದೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ನಾಗರಿಕರ ಮೇಲಿದೆ ಎಂದರು.
ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು, ಈಗಿನಿಂದಲೇ ಹಸಿರೀಕರಣದತ್ತ ಗಮನ ಹರಿಸಬೇಕಾದ ಸವಾಲು ಪ್ರಪಂಚದ ಎಲ್ಲ ರಾಷ್ಟ್ರಗಳ ಎದುರಿದೆ ಎಂದು ಎಕ್ಸಲಂಟ್ ಶಾಲೆ ಪ್ರಾಂಶುಪಾಲ ಶ್ರೀಕಾಂತ ಕೆ.ಎಸ್ ಹೇಳಿದರು.
ಭೂಮಿಯ ಸುತ್ತ ಆವರಿಸಿರುವ ಓರೆನ್ ಪದರು ಹಾಳಾಗುತ್ತಿದೆ. ಇದರಿಂದ ತಾಪಮಾನದಲ್ಲಿ ಏರಿಕೆಯಾಗುತ್ತಿದ್ದು ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಭವಿಷ್ಯದಲ್ಲಿ ಗಂಡಾಂತರ ಕಾದಿದೆ. ಹೀಗಾಗಿ ಈಗಿನಿಂದಲೇ ಪರಿಸರ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶನ ಮಲ್ಲಿಕಾರ್ಜುನ ಬಜಂತ್ರಿ, ಶಿಕ್ಷಕ ಮಂಜುನಾಥ ಮಾನೆ ಮತ್ತಿತರರಿದ್ದರು. ಸ್ಥಾನಿಕ ಸಂಪಾದಕ ಕೆ.ಎನ್. ರಮೇಶ ನಿರ್ವಹಿಸಿದರು.