

ರಾಯಚೂರು ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ಮತ್ತು ಹಸಿರು ನಾಳೆಯ ಕಡೆಗೆ ಎಂಬ ಶೀರ್ಷಿಕೆಯಡಿ ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಅರಣ್ಯ ಇಲಾಖೆ ಪ್ರಾದೇಶಿಕ ವಿಭಾಗ ಸಹಯೋಗದೊಂದಿಗೆ ಗುರುವಾರ ವಿಶ್ವ ವಿದ್ಯಾಲಯದ ಆವರಣದಲ್ಲಿ ಸುಸ್ಥಿರ ಜೀವನವನ್ನು ಪ್ರೇರೇಪಿಸಲು ದೊಡ್ಡ ಪ್ರಮಾಣದ ಸಸಿಗಳನ್ನು ನೆಡುವ ಅಭಿಯಾನ ಮಾಡಲಾಯಿತು.
ವಿವಿಯ ಕುಲಪತಿ ಡಾ. ಎಂ. ಹನುಮಂತಪ್ಪ ಮಾತನಾಡಿ, ಏಕ ಬಳಕೆಯ ಪ್ಲಾಸ್ಟಿಕ್‌ಗಳನ್ನು ತೆಗೆದು ಹಾಕುವ ತುರ್ತು ಅಗತ್ಯವಿದೆ. ಜೀವ ವೈವಿಧ್ಯತೆ, ಪರಿಸರ ಉಸ್ತುವಾರಿ ಮತ್ತು ಹವಾಮಾನ ಸ್ಥಿತಿ ಸ್ಥಾಪಕತ್ವಕ್ಕೆ ವಿಶ್ವವಿದ್ಯಾಯದ ಬದ್ದತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯು ಪದವಿ ಪಡೆಯುವರೆಗೂ ಒಂದು ಸಸಿಯನ್ನು ದತ್ತು ತೆಗೆದುಕೊಂಡು ಅದನ್ನು ಪಾಲನೆ ಪೋಷಣೆ ಸಂರಕ್ಷಣೆಯನ್ನು ನೋಡಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಲು ತಿಳಿಸಿದರು.
ಈ ಸಂದರ್ಭದಲ್ಲಿ ಕುಲಸಚಿವ ಡಾ.ದುರ್ಗೇಶ್, ಡೀನ್ ಡಾ.ನಾರಾಯಣರಾವ್ ಕೆ.,ಡಾ.ಶಹಬಾಜ್ ನೂರಿ, ಕೃಷಿ ಎಂಜಿನಿಯರಿಂಗ್ ಡೀನ್ ಡಾ.ಎಂ.ಎಸ್ ಅಯ್ಯನಗೌಡರು, ಪ್ರಾಧ್ಯಾಪಕ ಡಾ.ಬಸವರಾಜ ಸೇರಿ ಅನೇಕರು ಇದ್ದರು.