

ವಿರಾಜಪೇಟೆ : ಪಟ್ಟಣದ ಸೆಂಟ್ ಆನ್ಸ್ ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಪದವಿ ಕಾಲೇಜಿನ ಎನ್‌ಎಸ್‌ಎಸ್‌ಘಟಕ, ಯುವ ರೆಡ್ ಕ್ರಾಸ್ ಘಟಕ, ನೇಚರ್ ಕ್ಲಬ್ ಹಾಗೂ ಸಂತ ಅನ್ನಮ್ಮ ಪಿ.ಯು. ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಆಟದ ಮೈದಾನದ ಬಳಿಯಲ್ಲಿ ಗುರುವಾರ ಗಿಡಗಳನ್ನು ನೆಡುವುದರ ಮೂಲಕ ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.
ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ಹಾಗೂ ಪಿ. ಯು. ಕಾಲೇಜಿನ ಪ್ರಾಂಶುಪಾಲ ರೆ. ಫಾ. ಮದಲೈ ಮುತ್ತು ಮಾತನಾಡಿ, ಗಿಡಗಳನ್ನು ನೆಟ್ಟು ಬೆಳೆಸಿದರೆ ನಾವು ಉಸಿರಾಡುವ ಗಾಳಿಯು ಉತ್ತಮವಾಗಿರುತ್ತದೆ. ಜತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ನಿರ್ಮಿಸಲು ಎಲ್ಲರೂ ಪಣ ತೊಡಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪರಿಸರದ ಸಂರಕ್ಷಣೆಯ ಹೊಣೆ ಎಲ್ಲರ ಮೇಲಿದ್ದು, ಆರೋಗ್ಯವಂತ ಪರಿಸರವನ್ನು ನಿರ್ಮಿಸಲು ಎಲ್ಲರು ಪಣತೊಡಬೇಕು ಎಂದರು.
ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ಪರಿಸರ ದಿನ ಎಂಬುವುದು ಆಚರಣೆಗೆ ಮಾತ್ರ ಸೀಮಿತವಾಗಿರದೆ ಸ್ವಚ್ಛ ಪರಿಸರದ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ವಿಶೇಷವಾಗಿ ಯುವ ಜನತೆಯು ಸಾರ್ವಜನಿಕರಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಬೇಕೆಂದು ಕರೆಯನ್ನು ಕೊಟ್ಟರು.
ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಬಿ. ಎನ್. ಶಾಂತಿಭೂಷಣ್ ದಿನದ ಮಹತ್ವದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳು ಕಾಲೇಜು ಮೈದಾನದ ಬಳಿ ಹಾಗೂ ಕಾಲೇಜು ಅವರಣದ ಸಮೀಪ ಗಿಡಗಳನ್ನು ನೆಟ್ಟರು. ಪದವಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಬಿ.ಡಿ. ಹೇಮಾ, ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ವಿಲೀನ ಗೋನ್ಸಾಲ್ವೇಸ್, ದೈಹಿಕ ಶಿಕ್ಷಣ ನಿರ್ದೇಶಕ ಬಿ. ವಿ. ರಾಜ ರೈ, ಉಪನ್ಯಾಸಕರು, ಕಾಲೇಜಿನ ಎನ್‌ಎಸ್‌ಎಸ್, ಯುವ ರೆಡ್ ಕ್ರಾಸ್ ಘಟಕದ ಸ್ವಯಂ ಸೇವಾ ವಿದ್ಯಾರ್ಥಿಗಳು, ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.