

ವಿರಾಜಪೇಟೆ: ಮಲೆತಿರಿಕೆ ಬೆಟ್ಟದ ಶ್ರೀ ಶನೈಶ್ಚರ ಭಕ್ತ ಜನ ಮಂಡಳಿ ಹಾಗೂ ಪ್ರಗತಿ ವಿದ್ಯಾಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರ ಪ್ರಗತಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಕಳೆದ 24 ವರ್ಷಗಳಿಂದ ಶ್ರೀ ಶನೈಶ್ಚರ ಭಕ್ತ ಜನ ಮಂಡಳಿ ವಿವಿಧ ಸ್ಥಳಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನ ಆಚರಿಸಿ ಪರಿಸರ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಹಲವು ವರ್ಷಗಳಿಂದ ನಾನು ಕೂಡ ಭಾಗಿಯಾಗುತ್ತಿದ್ದೇನೆ. ಸರ್ಕಾರ ವರ್ಷಕ್ಕೊಮ್ಮೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಅರಣ್ಯಗಳಿಗೆ ಕರೆದುಕೊಂಡು ಹೋಗಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿತ್ರ ಕಲಾ ಶಿಕ್ಷಕ ಬಿ.ಆರ್ ಸತೀಶ್ ಪರಿಸರದ ಚಿತ್ರ ಬಿಡಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಗತಿ ವಿದ್ಯಾಸಂಸ್ಥೆ ಯ ಮುಖ್ಯಸ್ಥ ಮಾದಂಡ ತಿಮ್ಮಯ್ಯ, ಪ್ರಾಂಶುಪಾಲೆ ಸುಷ್ಮಾ ತಿಮ್ಮಯ್ಯ, ಸ್ಕೌಟ್ಸ್ ಅಂಡ್ ಗೈಡ್ಸ್‌ನ ಶಿಕ್ಷಕಿ ಡೈಸಿ, ಶ್ರೀ ಶನೈಶ್ಚರ ಭಕ್ತ ಜನ ಮಂಡಳಿ ಅಧ್ಯಕ್ಷ ಯುವರಾಜ್ ಕೃಷ್ಣ, ಸಂಸ್ಥೆಯ ಸದಸ್ಯರಾದ ಮಿಥುನ್ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.