ಪ್ರಾಕೃತಿಕ ಪರಿಸರದಿಂದ ಆರೋಗ್ಯಪೂರ್ಣ ಜೀವನ: ಪರಿಸರ ತಜ್ಞ ಶಿರಸಿಯ ಶಿವಾನಂದ ಕಳವೆ ಅಭಿಮತ

New Project (12)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಸುಂದರ, ಪ್ರಶಾಂತ ಪ್ರಾಕೃತಿಕ ಪರಿಸರದಿಂದ ಸುಖ, ಶಾಂತಿ, ನೆಮ್ಮದಿಯ ಆರೋಗ್ಯಪೂರ್ಣ ಜೀವನ ಸಾಧ್ಯವಾಗುತ್ತದೆ. ಅರಣ್ಯ ನೀತಿ ಬದಲಾಗಬೇಕು. ಶಿಕ್ಷಣದಲ್ಲಿ ಸಸ್ಯ ವೈವಿಧ್ಯ, ಪಾರಂಪರಿಕ ಸಸ್ಯಗಳ ಬಗ್ಗೆ ಅರಿವು, ಜಾಗೃತಿ ಮೂಡಿಸಿ ಎಲ್ಲರೂ ದೃಢಸಂಕಲ್ಪದೊಂದಿಗೆ ಪರಿಶುದ್ಧ ಪರಿಸರ ಸಂರಕ್ಷಣೆಯ ರಾಯಭಾರಿಗಳಾಗಬೇಕು ಎಂದು ಪರಿಸರ ತಜ್ಞ ಶಿರಸಿಯ ಶಿವಾನಂದ ಕಳವೆ ಹೇಳಿದರು.

ಉಜಿರೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಳ್ತಂಗಡಿ ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಎಸ್‌ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಡಾ.ಎಚ್.ಲಕ್ಷ್ಮೀಕಾಂತ್ ಮಾತನಾಡಿ, ಮಣ್ಣು, ನೀರು, ಮರ ಸಕಲ ಜೀವಿಗಳ ಆರೋಗ್ಯಪೂರ್ಣ ಜೀವನಕ್ಕೆ ಅನಿವಾರ್ಯ. ಅನಿಯಮಿತ ಬೋರ್‌ವೆಲ್‌ಗಳ ದುರಂತದಿಂದಾಗಿ ಕರಾವಳಿ ಕರಗುತ್ತಿದೆ. ಪರಿಸರ ಮಾಲಿನ್ಯ, ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದಾಗಿ ನದಿ ದಂಡೆ, ನದಿಪಾತ್ರಗಳು ಹಾಳಾಗುತ್ತಿವೆ. ಇವುಗಳನ್ನು ಸರ್ಕಾರವೇ ವಶಪಡಿಸಿ ಸಂರಕ್ಷಣೆ ಮಾಡಬೇಕು ಎಂದರು.

ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಪ್ರೊ.ಟಿ.ಅಶೋಕಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ವಠಾರದಲ್ಲಿ ಗಿಡ ನೆಡಲಾಯಿತು. ವಿದ್ಯಾರ್ಥಿಗಳಿಗೆ 250 ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ಬೆಳ್ತಂಗಡಿ ವಕೀಲರ ಸಂಘ ಅಧ್ಯಕ್ಷ ವಸಂತ ಮರಕಡ ಪರಿಸರ ಜಾಥಾಕ್ಕೆ ಚಾಲನೆ ನೀಡಿದರು.

ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ತುಳುಪುಳೆ ಉಪಸ್ಥಿತರಿದ್ದರು. ಎಸ್‌ಡಿಎಂ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎಸ್‌ಡಿಎಂ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ.ಬಿ.ಪ್ರಮೋದ್ ಕುಮಾರ್ ವಂದಿಸಿದರು. ಡಾ.ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು.

ಅತಿವೃಷ್ಟಿ- ಅನಾವೃಷ್ಟಿ, ಕೀಟನಾಶಕ ಬಳಕೆಯಿಂದ ಇಂದು ಶುದ್ಧ ನೀರು, ಗಾಳಿ, ಪರಿಶುದ್ಧ ಆಹಾರ ಸಿಗುತ್ತಿಲ್ಲ. ಮುಂದಿನ ಜನಾಂಗಕ್ಕೆ ಪರಿಶುದ್ಧ ಪರಿಸರ ರೂಪಿಸುವುದು ನಮ್ಮೆಲ್ಲರ ಹೊಣೆಗಾರಿಕೆ. ಭೂ ಮಾತೆಯ ಆರೈಕೆ ಮಾಡಬೇಕು. ಈಗ ಭೂಮಿ ತೀವ್ರ ನಿಗಾ ಘಟಕದಲ್ಲಿದ್ದು, ಅದನ್ನು ದಾದಿಯರಂತೆ ಪ್ರೀತಿಯಿಂದ ಶುಶ್ರೂಷೆ ಮಾಡಿ ಜನರಲ್ ವಾರ್ಡ್‌ಗೆ ತರಬೇಕು. ಶಿವಾನಂದ ಕಳವೆ, ಪರಿಸರ ತಜ್ಞ https://www.vijayavani.net/mla-vedavyasa-visit https://www.vijayavani.net/construction-of-a-pit-near-the-savanur-railway-track

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net