ನಾಲ್ವರಲ್ಲಿ ಒಬ್ಬರಿಗೆ ಮಧುಮೇಹ ಪತ್ತೆ: ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಆತಂಕ

World Diabetes Day Mandya
Published on

ಮಂಡ್ಯ: ಬದಲಾದ ಜೀವನಶೈಲಿಯ ಆಹಾರ ಪದ್ಧತಿಯಿಂದ ಏಷ್ಯಾದಲ್ಲಿಯೇ ಭಾರತ ಮಧುಮೇಹಿಗಳ ರಾಜಧಾನಿಯಾಗಿದೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿದರು.

ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿ ಧನ್ವಂತರ ಸಭಾಂಗಣದಲ್ಲಿ ಸಕ್ಕರೆನಾಡು ಅಲಯನ್ಸ್ ಸಂಸ್ಥೆ ಮತ್ತು ಸಮೃದ್ಧಿ ಅಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಧುಮೇಹ ದಿನಾಚರಣೆ ಮತ್ತು ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿಯೂ ಮಧುಮೇಹ ಕಾಣಿಸಿಕೊಳ್ಳುತ್ತಿದೆ. 2045ರ ವೇಳೆಗೆ ವಿಶ್ವದಲ್ಲಿ ಮಧುಮೇಹಿಗಳ ಸಂಖ್ಯೆ ಸುಮಾರು 783 ಮಿಲಿಯನ್ ಆಗಲಿದೆ. ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಮಧುಮೇಹ ಪತ್ತೆಯಾಗುತ್ತಿದೆ ಎಂದರು.

ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿ 1991ರಲ್ಲಿ ವಿಶ್ವ ಮಧುಮೇಹ ದಿನವನ್ನು ಪರಿಚಯಿಸಲಾಯಿತು. ವಿಜ್ಞಾನಿ ಸರ್ ಫೆಡ್ರಿಕ್ ಬೆಂಟಿಂಗ್ ಪ್ರಥಮ ಬಾರಿಗೆ ಮಧುಮೇಹಕ್ಕೆ ನೀಡುವ ’ಇನ್ಸುಲಿನ್’ ಸಂಶೋಧಿಸಿದರು. ಬೆಂಟಿಂಗ್ ಜನಿಸಿದ ದಿನ ನ.14. ಹಾಗಾಗಿ ಅವರ ಸವಿ ನೆನಪಿಗಾಗಿ 14ರಂದು ವಿಶ್ವ ಮಧುಮೇಹ ದಿನ ಆಚರಿಸಲಾಗುತ್ತಿದೆ ಎಂದು ನುಡಿದರು.

ಸಕ್ಕರೆ ಕಾಯಿಲೆಯನ್ನು ಸೈಲೆಂಟ್ ಕೊಲೆಗಾರ ಎಂದು ಹೇಳಲಾಗಿದೆ. ಈ ರೋಗವನ್ನು 4 ವಿಧವಾಗಿ ವಿಂಗಡಿಸಲಾಗಿದೆ. ಮೊಲದ ಹಂತದಲ್ಲಿಯೇ ಸೂಕ್ತ ವೈದ್ಯರ ಮಾರ್ಗದರ್ಶ ಮತ್ತು ಆಹಾರ ಪದ್ಧತಿ ಬಳಸಿದರೆ ಮಧುಮೇಹದೊಂದಿಗೆ ಬದುಕಬಹುದು. ಇಲ್ಲದಿದ್ದರೆ ನರಳಾಟ ಶುರುವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಪ್ರತಿ ವರ್ಷ ಸುಮಾರು 40 ಲಕ್ಷ ಜನರು ಮಧುಮೇಹ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಈ ಕಾಯಿಲೆಗೆ ಸರಿಯಾದ ಪರಿಣಾಮಕಾರಿ ಚಿಕಿತ್ಸೆ ಇಲ್ಲ. ಆದರೆ ನಮ್ಮ ಜೀವನಶೈಲಿ ಮತ್ತು ಆಹಾರ ಕ್ರಮಗಳಲ್ಲಿ ಕೆಲವೊಂದು ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಹುದು ಎಂದು ಕಿವಿಮಾತೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ಲಾಸ್ಟಿಕ್ ಸರ್ಜರಿ ತಜ್ಞೆ ಡಾ.ಸೋನಾಲಿ ಉಚ್ಚಿಲ್, ವಿಶ್ವದಲ್ಲಿ ಲಕ್ಷಾಂತರ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಕಳಪೆ ಮತ್ತು ಜಡ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ನಿದ್ರೆಯ ಕೊರತೆ, ಒತ್ತಡ ಸೇರಿದಂತೆ ಕೆಲ ಕಾರಣದಿಂದ ಮಧುಮೇಹ ಕಾಯಿಲೆ ಬಾಧಿಸಬಹುದು ಎಂದರು.

ತಜ್ಞ ವೈದ್ಯ ಡಾ.ಬಾಬು, ಅಲಯನ್ಸ್ ಸಂಸ್ಥೆ ಸಚಿವ ಸಂಪುಟ ಕಾರ್ಯದರ್ಶಿ ಚಂದ್ರಶೇಖರ್, ಮಾಂಡವ್ಯ ಅಲಯನ್ಸ್ ಸಂಸ್ಥೆ ಅಧ್ಯಕ್ಷೆ ಪ್ರೊ.ಶಿವಕುಮಾರ್, ಪ್ರಾಂತೀಯ ಅಧ್ಯಕ್ಷೆ ನೀನಾಪಟೇಲ್, ಲೋಕೇಶ್ ಇತರರಿದ್ದರು. ಇದೇ ಸಂದರ್ಭದಲ್ಲಿ ಸಕ್ಕರೆ ಕಾಯಿಲೆ, ಇಸಿಜಿ, ಪಾದಗಳ ತಪಾಸಣೆ ಉಚಿತವಾಗಿ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net