

ವಿಕ್ರಮ ನಾಡಿಗೇರ ಧಾರವಾಡ
ರಾಜ್ಯದಲ್ಲಿ ಮಾನವ ಸರಪಳಿ ನಿರ್ಮಾಣ ಮಾಡುವ ಮೂಲಕ ಪ್ರಜಾಪ್ರಭುತ್ವ ದಿನವನ್ನು ಭಾನುವಾರ ವಿಶಿಷ್ಟವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯಲ್ಲೇ ಅತೀ ಹೆಚ್ಚು (3,57,555) ಜನರು ಪಾಲ್ಗೊಂಡಿದ್ದು ವಿಶೇಷ.
ರಾಜ್ಯ ಸರ್ಕಾರ ವಿಶ್ವ ಪ್ರಜಾಪ್ರಭುತ್ವ ದಿನ ನಿಮಿತ್ತ ಸಂವಿಧಾನದ ಮಹತ್ವ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಬೃಹತ್ ಮಾನವ ಸರಪಳಿ ನಿರ್ಮಾಣ ಮಾಡುವ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು.
ಬೀದರ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆವರೆಗೆ ಬೃಹತ್ ಮಾನವ ಸರಪಳಿ (2500 ಕಿ.ಮೀ)ನಿರ್ವಣ ಮಾಡುವ ಈ ಕಾರ್ಯಕ್ರಮದಲ್ಲಿ ಇಡೀ ರಾಜ್ಯದಲ್ಲಿ ಸುಮಾರು 30 ಲಕ್ಷ ಜನರು ಭಾಗಿಯಾಗಿದ್ದರು. ಕಾರ್ಯಕ್ರಮಕ್ಕೆ ನೋಂದಣಿ ಮಾಡಿಸಿಕೊಂಡು ಭಾಗವಹಿಸಿದವರಿಗೆ ಪ್ರಮಾಣಪತ್ರ ಸಹ ನೀಡಲಾಗಿದೆ. ಇಂತಹ ವಿಶಿಷ್ಟ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯಿಂದಲೇ ಅತೀ ಹೆಚ್ಚು ಜನರು (3,57,555) ಪಾಲ್ಗೊಂಡಿದ್ದು ಹೆಮ್ಮೆಯ ವಿಷಯವಲ್ಲದೆ, ಜಿಲ್ಲೆ ಅಗ್ರ ಸ್ಥಾನದಲ್ಲಿದೆ. ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 11,708 ಪಾಲ್ಗೊಂಡಿದ್ದು, ಈ ಜಿಲ್ಲೆ ಕೊನೇ ಸ್ಥಾನದಲ್ಲಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಭಾನುವಾರ ಬೆಳಗ್ಗೆವರೆಗೂ ನೋಂದಣಿಗೆ ಅವಕಾಶ ಇತ್ತು. ಧಾರವಾಡ ಜಿಲ್ಲೆಯಲ್ಲಿ ವೈಯಕ್ತಿಕವಾಗಿ 47,695, ಸಂಘ-ಸಂಸ್ಥೆಗಳು 1914 ಹಾಗೂ ಇತರರು ಸೇರಿ ಒಟ್ಟು 50,008 ನೋಂದಣಿಯಾಗಿದ್ದು, 3,57,555 ಜನರು ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮ ಪಾಲ್ಗೊಂಡಿದ್ದರು.
ಈ ಹಿಂದೆ ರಾಜ್ಯ ಸರ್ಕಾರ ತಿಂಗಳ ಪರ್ಯಂತ ಏರ್ಪಡಿಸಿದ್ದ ಸಂವಿಧಾನ ಜಾಥಾದಲ್ಲೂ ಹೆಚ್ಚು ಜನರು ಪಾಲ್ಗೊಳ್ಳುವ ಮೂಲಕ ಧಾರವಾಡ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿತ್ತು.
ಧಾರವಾಡ ಕೆಸಿಡಿ ಮೈದಾನದಲ್ಲಿ ಕೇಸರಿ, ಬಿಳಿ, ಹಸಿರು ವರ್ಷದ ಪೋಷಾಕು ಧರಿಸಿದ ಮಕ್ಕಳು ಮಾನವ ಸರಪಳಿ ಮೂಲಕ ಭಾರತ ಹಾಗೂ ಕರ್ನಾಟಕ ರಾಜ್ಯದ ನಕಾಶೆ ನಿರ್ಮಾಣ ಮಾಡಿದ್ದರು. ಇದಲ್ಲದೆ ಸುಮಾರು 1 ಕಿ.ಮೀ. ಉದ್ದದ ಕರ್ನಾಟಕ ಧ್ವಜ ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು.