

ಬೆಳಗಾವಿ: ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ-2023ರ ಘೋಷಣೆಯಂತೆ ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಅಧಿಕಾರಿಗಳು ಶ್ರಮಿಸಬೇಕು. ಎಲ್ಲ ಇಲಾಖೆಗಳ ಸಹಕಾರದೊಂದಿಗೆ ಸ್ಥಳೀಯವಾಗಿ ಕಂಡುಬಂದ ಬಾಲ ಕಾರ್ಮಿಕರನ್ನು ರಕ್ಷಿಸಿ, ಶಿಕ್ಷಣ ಒದಗಿಸಲು ಕೈ ಜೋಡಿಸಬೇಕು ಎಂದು ಬೆಳಗಾವಿ ಉಪ ವಿಭಾಗಾಧಿಕಾರಿ ಬಲರಾಮ ಚವ್ಹಾಣ್ ಅವರು ತಿಳಿಸಿದರು.
ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ವಕೀಲರ ಸಂಘ ಬೆಳಗಾವಿ ಹಾಗೂ ಕಾರ್ಮಿಕ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಗಡಿ-ಮಳಿಗೆಗಳಲ್ಲಿ, ಗಾರ್ಮೆಂಟ್ಸ್, ಬೇಕರಿ, ಗ್ಯಾರೇಜ್, ಹೊಟೇಲ್, ಕಾರ್ಖಾನೆಗಳಲ್ಲಿ ಮಕ್ಕಳು ಕೆಲಸ ಮಾಡುತ್ತಿದ್ದು, ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅರ್ಹತೆಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದುಡುಸಿಕೊಳ್ಳುವುದು ಕಾನೂನು ಬಾಹಿರ. ಇದನ್ನು ನಿಯಂತ್ರಣಕ್ಕೆ ತರಲು ಸಾರ್ವಜನಿಕರು ಸಹ ಸಹಕಾರ ನೀಡಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮುರಳಿ ಮೋಹನ್ ರೆಡ್ಡಿ ಮಾತನಾಡಿ, ಬಾಲ ಕಾರ್ಮಿಕರಾಗಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ಸ್ವಾತಂತ್ರ್ಯ ಪೂರ್ವದಿಂದಲೂ ವಿವಿಧ ಕಾರ್ಮಿಕ ಕಾಯ್ದೆಗಳು ಜಾರಿಯಲ್ಲಿವೆ. ಬಾಲ ಕಾರ್ಮಿಕ ಪದ್ಧತಿ 2016ರ ತಿದ್ದುಪಡಿಯಂತೆ 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳಬಾರದು. ಮಕ್ಕಳ ಪ್ರತಿಭೆ ಗುರುತಿಸಿ ಬೆಳಕಿಗೆ ತರಬೇಕು. ಅಂತಹ ಮಕ್ಕಳನ್ನು ರಕ್ಷಿಸಿ, ಕಡ್ಡಾಯ ಶಿಕ್ಷಣ ಕಾಯ್ದೆ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದರು.
ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ-2023ರ ಘೋಷಣೆ ಮೂಲಕ ಬಾಲಕಾರ್ಮಿಕರ ರಕ್ಷಣೆ ಕುರಿತು ಪ್ರಮಾಣವಚನ ಸ್ವೀಕರಿಸಲಾಯಿತು. ಬಳಿಕ ಈ ಹಿಂದೆ ಬಾಲಕಾರ್ಮಿಕ ಪದ್ಧತಿಯಿಂದ ಹೊರಬಂದು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಚೆಕ್ ವಿತರಿಸಲಾಯಿತು.
ಎಸ್ಪಿ ಸಂಜೀವ ಪಾಟೀಲ, ಜಿಪಂ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ, ಉಪ ಕಾರ್ಮಿಕ ಆಯುಕ್ತ ನಾಗೇಶ್, ಶಾಲಾ ಸುರಕ್ಷರತ ಇಲಾಖೆ ಉಪ ನಿರ್ದೇಶಕ ಬಸವರಾಜ ನಾಲತವಾಡ, ಬಿಇಒ ರವಿ ಭಜಂತ್ರಿ ಇತರರಿದ್ದರು. ಬಾಲಕಾರ್ಮಿಕ ಸಂಸ್ಥೆಯ ಯೋಜನಾ ನಿರ್ದೇಶಕಿ ಜ್ಯೋತಿ ಕಾಂತೆ ನಿರೂಪಿಸಿದರು. ಕಾರ್ಮಿಕ ಇಲಾಖೆ ಅಧಿಕಾರಿ ತರನ್ನಂ ಬಂಗಾಲಿ ವಂದಿಸಿದರು.