ವಿಶ್ವ ಕರಾವಳಿ ಸ್ವಚ್ಛತಾ ದಿನಾಚರಣೆ

New Project (1)
Published on

ಕಾಸರಗೋಡು: ವಿಶ್ವ ಕರಾವಳಿ ಸ್ವಚ್ಛತಾ ದಿನಾಚರಣೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್ ವಿದ್ಯಾರ್ಥಿಗಳು ಬೇಕಲ ಸಮುದ್ರ ದಡವನ್ನು ಸ್ವಚ್ಛಗೊಳಿಸಿದರು.

‘ಸ್ವಚ್ಛ ಸಾಗರ್, ಸುರಕ್ಷಿತ್ ಸಾಗರ್’ ಎಂಬ ಸಂದೇಶದೊಂದಿಗೆ ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಅಧೀನದಲ್ಲಿ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಕರಾವಳಿ ಸಂಶೋಧನಾ ಕೇಂದ್ರ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೇಕಲ್ ರೆಸಾರ್ಟ್ ಅಭಿವೃದ್ಧಿ ನಿಗಮ, ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಕೌನ್ಸಿಲ್, ಪೆರಿಯಡುಕ್ಕ ಎಂಪಿ ಇಂಟರ್ ನ್ಯಾಷನಲ್ ಸ್ಕೂಲ್, ಕಾಲೇಜು ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಶುಚೀಕರಣದ ಮೂಲಕ ಒಂದು ಟನ್ ತ್ಯಾಜ್ಯ ಸಂಗ್ರಹಿಸಲಾಗಿದ್ದು, ಇದರಲ್ಲಿ 368 ಕೆ.ಜಿ. ಪ್ಲಾಸ್ಟಿಕ್ ಹಾಗೂ ಉಳಿದವುಗಳಲ್ಲಿ ಕಾಗದ, ಗಾಜು, ಲೋಹ, ಬಟ್ಟೆ ಮತ್ತು ರಬ್ಬರ್ ತ್ಯಾಜ್ಯ ಒಳಗೊಂಡಿತ್ತು. ಸಂಗ್ರಹಿಸಲಾದ ತ್ಯಾಜ್ಯವನ್ನು ವಿಂಗಡಿಸಿ ವೈಜ್ಞಾನಿಕವಾಗಿ ಸಂಸ್ಕರಿಸುವ ನಿಟ್ಟಿನಲ್ಲಿ ಮಹ್ಯುಬಾ ಇಕೋ ಸೊಲ್ಯೂಷನ್ಸ್‌ಗೆ ಹಸ್ತಾಂತರಿಸಲಾಯಿತು.

ವಿದ್ಯಾರ್ಥಿಗಳು ಸ್ವಚ್ಛತೆಯ ಮಹತ್ವ ಸಾರುವ ಮರಳು ಶಿಲ್ಪ ರಚಿಸಿದರು. ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿದ್ದು ಪಿ.ಅಲ್ಗೂರ್ ಕಾರ್ಯಕ್ರಮ ಉದ್ಘಾಟಿಸಿದರು. ಬಿಆರ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಶಿಜಿನ್ ಪರಂಬತ್ ಶುಚಿತ್ವ ಪ್ರತಿಜ್ಞೆ ಬೋಧಿಸಿದರು. ಸ್ಟೂಡೆಂಟ್ಸ್ ವೆಲ್ಫೇರ್ ಡೀನ್ ಪ್ರೊ.ರಾಜೇಂದ್ರ ಪಿಲಾಂಗಟ್ಟೆ, ಮಹ್ಯುಬ ಇಕೋ ಸಲ್ಯೂಷನ್ಸ್ ವ್ಯವಸ್ಥಾಪಕ ನಿರ್ದೇಶಕ ಕುಞಬ್ದುಲ್ಲಾ, ಬೇಕಲ ಬೀಚ್ ಪಾರ್ಕ್ ನಿರ್ದೇಶಕ ಮುಹಮ್ಮದ್ ಅನಸ್, ವಿಶ್ವವಿದ್ಯಾಲಯದ ಎನ್ನೆಸ್ಸೆಸ್ ಸಂಯೋಜಕ ಡಾ.ಎಸ್.ಅನ್ಬಳಗಿ, ತಾಂತ್ರಿಕ ಅಧಿಕಾರಿ ಡಾ.ವಿ.ಸುಧೀಶ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net