ಬಾಲಕಾರ್ಮಿಕರನ್ನು ನೇಮಿಸಿಕೊಳ್ಳುವುದು ಅಪರಾಧ: ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಬಿ.ಜಿ.ರಮಾ ಎಚ್ಚರಿಕೆ

1 (1)
Published on

ಮಂಡ್ಯ: ಅಭಿವೃದ್ಧಿ ಹೆಸರಲ್ಲಿ ಬಾಲಕಾರ್ಮಿಕರನ್ನು ಉದ್ಯಮಗಳಲ್ಲಿ ನೇಮಿಸಿಕೊಳ್ಳುವುದು ಅಪರಾಧ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಬಿ.ಜಿ.ರಮಾ ಎಚ್ಚರಿಕೆ ನೀಡಿದರು.

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಾಲ ಕಾರ್ಮಿಕರು ಹಾಗೂ ಕಿಶೋರ ಕಾರ್ಮಿಕರು ಖಾಸಗಿ ಸಂಸ್ಥೆ, ಉದ್ದಿಮೆಗಳಲ್ಲಿ ಹಾಗೂ ಮನೆಗಳಲ್ಲೂ ಕೂಡ ಇರುತ್ತಾರೆ. ಇದು ಕಾನೂನು ಉಲ್ಲಂಘನೆ ಜತೆಗೆ ಅಪರಾಧವಾಗಿದೆ. ಎಷ್ಟೇ ಕಾನೂನು ಬಂದರೂ ಅದನ್ನು ಉಲ್ಲಂಘಿಸಿ ಹಲವು ಸಂಸ್ಥೆಗಳು ಬಾಲಕಾರ್ಮಿಕರನ್ನು ನೇಮಕ ಮಾಡಿಕೊಳ್ಳುತ್ತಿವೆ. ಬಾಲಕಾರ್ಮಿಕ ಪದ್ಧತಿ ಹಾಗೂ ಅದರ ಕಾನೂನುನಿನ ಬಗ್ಗೆ ತಿಳಿವಳಿಕೆ ಬರಲೆಂದು ಇಂತಹ ಜಾಗೃತಿ ಜಾಥಗಳು ನಡೆಯುತ್ತಿವೆ. ಬಾಲಕಾರ್ಮಿಕ ಹಾಗೂ ಕಿಶೋರಕಾರ್ಮಿಕ ಪದ್ಧತಿಯನ್ನು ಅನುಸರಿಸಿದರೆ ಕಾನೂನಿನ ಪಂಜರದಲ್ಲಿ ಸಿಲುಕಬೇಕಾಗುತ್ತದೆ ಎಚ್ಚರಿಸಿದರು.

ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾತನಾಡಿ, 18 ವರ್ಷದೊಳಗಿನವರನ್ನು ಬಾಲಕಾರ್ಮಿಕರಾಗಿ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಪಾಲಕರು ಎಷ್ಟೇ ಕಷ್ಟ ಕಾರ್ಪಣ್ಯಗಳಿದ್ದರೂ ತಮ್ಮ ಮಕ್ಕಳನ್ನ ಯಾವುದೇ ಕೆಲಸಕ್ಕೆ ಸೇರಿಸಬಾರದು. ಸರ್ಕಾರ ನೀಡುತ್ತಿರುವ ಉಚಿತ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ಕೊಡಿಸಬೇಕು. ಆ ಮೂಲಕ ಸಾಕ್ಷರ ಹಾಗೂ ಸಭ್ಯ ಸಮಾಜ ನಿರ್ಮಾಣ ಮಾಡುವುದಕ್ಕೆ ಕೈ ಜೋಡಿಸಬೇಕು. ಖಾಸಗಿ ಸಂಸ್ಥೆ, ಹೋಟೆಲ್ ಹಾಗೂ ಕಾರ್ಖಾನೆಗಳಲ್ಲಿ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳುವುದು ಕಂಡುಬಂದರೆ ಅವರನ್ನ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಾಣಿ ಎ. ಶೆಟ್ಟಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಮಂಜುಳಾದೇವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜು, ಡಿಡಿಪಿಐ ಎಸ್.ಟಿ ಜವರೇಗೌಡ, ವಕೀಲರ ಸಂಘದ ಅಧ್ಯಕ್ಷ ಎಂ.ಟಿ.ರಾಜೇಂದ್ರ ಇತರರಿದ್ದರು.

ಡಿಸಿ ಕಚೇರಿಯಿಂದ ಹೊರಟ ಜಾಥವು ಮೈಸೂರು-ಬೆಂಗಳೂರು ರಸ್ತೆ, ಜಯಚಾಮರಾಜೇಂದ್ರ ಒಡೆಯರ್ ವೃತ್ತದ ಮೂಲಕ ಪ್ರಮುಖ ಬೀದಿಗಳಲ್ಲಿ ಸಾಗಿ ಕರ್ನಾಟಕ ಸಂಘ ಆವರಣದಲ್ಲಿ ಮುಕ್ತಾಯವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net