

ಮಂಡ್ಯ: ಜಗತ್ತಿನಲ್ಲಿ ಅತಿ ಹೆಚ್ಚು ಜನರ ಸಾವಿಗೆ 2ನೇ ಕಾರಣವಾಗಿರುವುದು ಕ್ಯಾನ್ಸರ್ ರೋಗ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿದರು.
ತಾಲೂಕಿನ ಕೀಲಾರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಸೋಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್, ಸಕ್ಕರೆನಾಡು ಅಲಯನ್ಸ್ ಸಂಸ್ಥೆ, ಕೃಷಿಕ ಅಲಯನ್ಸ್ ಸಂಸ್ಥೆ ಸಹಯೋಗದಲ್ಲಿ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಆಯೋಜಿಸಿದ್ದ ಕ್ಯಾನ್ಸರ್ ಜಾಗೃತಿ, ತಪಾಸಣೆ ಹಾಗೂ ಪೌಷ್ಠಿಕಾಂಶ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾಗತಿಕವಾಗಿ ಅಂದಾಜು 2 ಕೋಟಿ ಜನ ಹೊಸದಾಗಿ ಕ್ಯಾನ್ಸರ್ ರೋಗಿಯಾಗಿ ಸೇರ್ಪಡೆಯಾಗುತ್ತಿದ್ದಾರೆ. ಕ್ಯಾನ್ಸರ್‌ನಿಂದ ಆಗುವ ಸಾವು-ನೋವು ತಡೆಯಲು 2020ನೇ ಫೆ.2ರಿಂದ ವಿಶ್ವ ಕ್ಯಾನ್ಸರ್ ಜಾಗೃತಿ ಅಭಿಯಾನ ಆರಂಭಗೊಂಡಿದೆ ಎಂದರು.
ಜನರಿಗೆ ರೋಗಗಳು ಬರದಂತೆ ಜಾಗೃತಿ ಮೂಡಿಸಲು ಮತ್ತು ಆರೋಗ್ಯದ ಕಾಳಜಿ ಬಗ್ಗೆ ಅರಿವು ಹೆಚ್ಚಿಸಲು ವಿಶ್ವ ಆರೋಗ್ಯಸಂಸ್ಥೆ ಇಂತಹ ದಿನಗಳನ್ನು ನಿಗದಿಮಾಡಿ ಸರ್ಕಾರ, ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅಭಿಯಾನ ಮಾಡುತ್ತಿದೆ. ಇದು ಕಳೆದ 24 ವರ್ಷದಿಂದ ನಡೆದುಕೊಂಡು ಬರುತ್ತಿದೆ. ಅರಿವೇ ಆರೋಗ್ಯ, ಜಾಗೃತಿಯೇ ಮದ್ದು ಎಂದು ತಿಳಿದುಕೊಂಡವರು ಆನಾರೋಗ್ಯದ ಅನಾಹುತಗಳಿಗೆ ಸಿಲುಕುವುದಿಲ್ಲ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್, ಪುರುಷರಲ್ಲಿ ಲೀವರ್, ಗಂಟಲು, ಬಾಯಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ರೋಗಲಕ್ಷಣಗಳು ಕಂಡ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ 1 ಮತ್ತು 2ನೇ ಹಂತದಲ್ಲಿಯೇ ಚಿಕಿತ್ಸೆ ಪಡೆದರೆ ಗುಣಮುಖ ಜೀವನ ನಡೆಸಬಹುದು. ಮಧುಮೇಹಿಗಳು ಜಾಗೃತಿಗೊಂಡು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಸಿ.ಬೆಟ್ಟಸ್ವಾಮಿ ಮಾತನಾಡಿ, ಕ್ಯಾನ್ಸರ್ ಬಗ್ಗೆ ಜನರು ಯೋಚಿಸುವುದೇ ಇಲ್ಲ. ಆರೋಗ್ಯದಲ್ಲಾಗುವ ಬದಲಾವಣೆಗೆ ಬಗ್ಗೆ ವೈದ್ಯರಲ್ಲಿ ತೋರಿಸಿಕೊಳ್ಳುವುದಿಲ್ಲ. ಈ ಕಾಲದಲ್ಲಿಯೂ ವೈದ್ಯರಲ್ಲಿ ಹೇಳಿಕೊಳ್ಳದೆ ನಾಚಿಕೆ, ಮುಜುಗರಪಡುವ ಜನರಿದ್ದಾರೆ. ಯಾವ ಕಾಯಿಲೆಗಳನ್ನು ತಡೆಯಬಾರದು. ಅಂತೆಯೇ ಉದಾಸೀನ, ಬೇಜವಾಬ್ದಾರಿಯಾಗಿ ನಡೆದುಕೊಳ್ಳಬಾರದು. ಎಲ್ಲವೂ ಮೀರಿದ ನಂತರ ಅಥವಾ ನೋವು ಹೆಚ್ಚಾದ ನಂತರ ವೈದ್ಯರ ಬಳಿ ಬರುತ್ತಾರೆ. ಆಗ ಪರಿತಪಿಸುತ್ತಾರೆ. ಇಂತಹ ಸನ್ನಿವೇಶಗಳನ್ನು ವೈದ್ಯರು ಎದುರಿಸಬೇಕಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಶಂಕರ್, ವೈದ್ಯಾಧಿಕಾರಿ ಡಾ.ಆನಂದ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಪ್ರಕೃತಿ, ಡಾ.ಚಂದ್ರಶೇಖರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರವಿ, ಕೆ.ಎಸ್.ಚಂದ್ರಶೇಖರ್, ಮಂಜುನಾಥ್, ನವ್ಯಶ್ರೀ, ಸಿದ್ದರಾಜು, ಶಿವರಾಜು ಇತರರಿದ್ದರು.
ಇದೇ ಸಂದರ್ಭದಲ್ಲಿ 25ಕ್ಕೂ ಹೆಚ್ಚು ಜನ ಕ್ಯಾನ್ಸರ್ ಬಾಧಿತರಿಗೆ ಪೌಷ್ಠಿಕ ಆಹಾರದ ಕಿಟ್ ವಿತರಣೆ ಮಾಡಲಾಯಿತು. ಸ್ಯಾಂಜೋ ಆಸ್ಪತ್ರೆಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರಿಂದ ಜಾಗೃತಿ ಅಭಿಯಾನ ನಡೆಯಿತು.