

ಮಂಡ್ಯ: ಕ್ಯಾನ್ಸರ್ ವಾಸಿಯಾಗುವ ಕಾಯಿಲೆ. ಆದರೆ ಸರಿಯಾದ ಸಮಯದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಂಡರೆ ಗುಣಪಡಿಸಬಹುದು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ತಿಳಿಸಿದರು.
ನಗರದ ಮಿಮ್ಸ್ ಆವರಣದ ಹೆರಿಗೆ ವಿಭಾಗದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಹಾಗೂ ಪರಿಸರ ರೂರಲ್ ಡೆವಲಪ್ಮೆಂಟ್ ಸಂಸ್ಥೆ ಮಂಗಲ, ಮಮತೆಯ ಮಡಿಲು ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಕ್ಯಾನ್ಸರ್ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ಯಾನ್ಸರ್ ಗುಣಪಡಿಸಬಹುದಾದಂತಹ ಔಷಧ ಬಂದಿವೆ. ಮುನ್ನೆಚ್ಚರಿಕೆ ತಿಳಿದುಕೊಂಡರೆ ಪರಿಹರಿಸಬಹುದು. ವೈದ್ಯರಲ್ಲಿ ನಂಬಿಕೆ ಇಡಬೇಕು. ಸಂಪೂರ್ಣವಾಗಿ ಜೀವನದಲ್ಲಿ ನಂಬಿಕೆ ಅಳವಡಿಸಿಕೊಂಡರೆ ಕಾಯಿಲೆಯಿಂದ ಹೊರ ಬರಬಹುದು. ಮನುಷ್ಯ ಒತ್ತಡದ ಜೀವನ ನಡೆಸುತ್ತಿದ್ದಾನೆ. ಒತ್ತಡವನ್ನು ಕಡಿಮೆ ಮಾಡಲು ಯೋಗ, ಧ್ಯಾನ ಅಳವಡಿಸಿಕೊಂಡು ಆರೋಗ್ಯಕರವಾಗಿರಬಹುದು ಎಂದರು.
ಮಿಮ್ಸ್ ಸ್ಥಾನೀಯ ವೈದ್ಯಾಧಿಕಾರಿ ಡಾ.ವೆಂಕಟೇಶ್, ಪ್ರಾಧ್ಯಾಪಕ ಡಾ.ಚಂದ್ರೇಗೌಡ, ಮಮತೆಯ ಮಡಿಲಿನ ಮಂಗಲ ಎಂ.ಯೋಗೀಶ್, ರೆಡ್‌ಕ್ರಾಸ್ ಸಂಸ್ಥೆ ಜಂಟಿ ಕಾರ್ಯದರ್ಶಿ ರಂಗಸ್ವಾಮಿ ಇತರರಿದ್ದರು. ಇದೇ ಸಂದರ್ಭದಲ್ಲಿ ಸಂತೆಕಸಲಗೆರೆ ಬಸವರಾಜು ಮತ್ತು ತಂಡ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.