

ಮಂಡ್ಯ: ಬೆಂಕಿ ಅವಘಡದಲ್ಲಿ ಗಂಭೀರ ಸುಟ್ಟಗಾಯವಾದಾಗ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಎಂದು ಜನರಲ್ ಮತ್ತು ಪ್ಲಾಸ್ಟಿಕ್ ಸರ್ಜರಿ ತಜ್ಞೆ ಡಾ.ಸೊನಾಲಿ ಉಚ್ಚಿಲ್ ಹೇಳಿದರು.
ನಗರದ ಚಾಮುಂಡೇಶ್ವರಿ ಬಾಡವಣೆಯ ಧನ್ವಂತರಿ ಮೆಡಿಕಲ್ ಸಭಾಂಗಣದಲ್ಲಿ ಅಸೊಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ವಿಶ್ವ ಸುಟ್ಟ ಗಾಯಗಳ ಜಾಗೃತಿ ಸಪ್ತಾಹ-ಸುಟ್ಟಗಾಯಗಳ ಬಗ್ಗೆ ಪ್ರಾತ್ಯಕ್ಷಿಕೆ ಜಾಗೃತಿ ಹಾಗೂ ಚಿಕಿತ್ಸಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಮಾನ್ಯವಾಗಿ ಬೆಂಕಿ ಅವಘಡ, ಪಟಾಕಿ ಸಿಡಿತ, ಬಿಸಿನೀರು ತಾಕಿದಾಗ ಹಾಗೂ ವಿದ್ಯುತ್ ಸ್ಪರ್ಶದಿಂದ ಉಂಟಾದ ಗಂಭೀರ ಗಾಯಗಳಿಗೆ ಸ್ಥಳೀಯವಾಗಿ ಲಭ್ಯವಾಗುವ ಟೂತ್‌ಪೇಸ್ಟ್, ಐಸ್‌ನೀರು, ಅನಗತ್ಯ ಕ್ರೀಮ್‌ಗಳನ್ನು ಹಚ್ಚಬೇಡಿ. ಬದಲಿಗೆ ವೈದ್ಯರನ್ನು ಸಂಪರ್ಕಿಸಿ. ಇಲ್ಲದಿದ್ದರೆ ಚರ್ಮದ ಆರೋಗ್ಯ ಹಾಳಾಗುತ್ತದೆ. ಪ್ರಪಂಚದಲ್ಲಿ ಅನೇಕ ಅಗ್ನಿಜ್ವಾಲೆ ತೀವ್ರತೆಯ ಸುಟ್ಟಗಾಯಗಳಿಂದ ಸಾಕಷ್ಟು ಜನರು ಅಸುನೀಗಿದ್ದಾರೆ. ಚರ್ಮ ಸುಟ್ಟಸ್ಥಳಗಳಿಗೆ ಅನಗತ್ಯ ಕ್ರೀಮ್, ರಾಸಾಯನಿಕ ಇತರೆ ದ್ರವ್ಯಗಳನ್ನು ಹಾಕಿ, ಚರ್ಮರೋಗಕ್ಕೂ ಕಾರಣವಾಗುತ್ತಿದೆ ಎಂದು ಎಚ್ಚರಿಸಿದರು.
ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸೂರ್ಯ ಅಥವಾ ನೇರಳಾತೀತ ಕಿರಣಗಳಿಂದ ಮನುಷ್ಯನ ಚರ್ಮ ಸುಟ್ಟಗಾಯಗಳಂತೆ ಕಂಡುಬರುವುದು ಹೆಚ್ಚಾಗುತ್ತಿದೆ. ವಿಕಿರಣಗಳಿಂದ ಚರ್ಮರೋಗಗಳು ಹೆಚ್ಚಾಗುತ್ತಿವೆ. ಜಗತ್ತಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಕಾಲಘಟ್ಟದಲ್ಲಿರುವ ಮನುಷ್ಯ ಸುಟ್ಟಗಾಯಗಳ ಸ್ಥಳಗಳಿಗೆ ಆಧುನಿಕ ಚಿಕಿತ್ಸೆ ಪಡೆದುಕೊಂಡು ಪ್ಲಾಸ್ಟಿಕ್ ಸರ್ಜರಿಗೆ ಮುಂದಾಗಿದ್ದಾನೆ. ತನ್ನ ಚರ್ಮವನ್ನು ಇತರೆ ಭಾಗಗಳಿಗೆ ಬಳಸುವ ವೈದ್ಯಲೋಕದ ತಂತ್ರಜ್ಞಾನ ಹೆಚ್ಚಿದೆ. ಪ್ರತಿವರ್ಷ ದೇಶದಲ್ಲಿ ಸುಟ್ಟಗಾಯಗಳಿಂದ ಸುಮಾರು 10 ಲಕ್ಷ ಜನ ಬಳಲುತ್ತಿದ್ದಾರೆ. ಸಾಕಷ್ಟು ಜನ ಸಾವನ್ನಪ್ಪುತ್ತಿದ್ದಾರೆ. ಸುಟ್ಟಗಾಯಗಳನ್ನು ಕಡೆಗಣಿಸಬಾರದು. ಜಾಗೃತಿಯಾಗಿ ಇರಬೇಕು. ಅಗ್ನಿ ದುರಂತ, ವಿದ್ಯುತ್ ಸ್ಪರ್ಶ, ಸ್ಫೋಟ, ಬಿಸಿನೀರು, ಬಿಸಿಹಾಲು ಸುಟ್ಟಗಾಯಗಳಿಗೆ ವೈದ್ಯರಿಂದ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಎಚ್ಚರಿಸಿದರು.
ಅಲಯನ್ಸ್ ಸಂಸ್ಥೆ ಸಂಪುಟ ಕಾರ್ಯದರ್ಶಿ ಎಸ್.ಪುಟ್ಟಸ್ವಾಮಿ, ಪ್ರತಿಭಾಂಜಲಿ ಪ್ರೊ.ಡೇವಿಡ್, ಶುಗರ್‌ಸಿಟಿ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಲೋಕೇಶ್, ಖಜಾಂಚಿ ಸೋಮಶೋಖರ್, ಕೃಷಿಕ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಮಂಜುನಾಥ್, ಮಾಂಡವ್ಯ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಪ್ರೊ.ಶಿವಕುಮಾರ್, ರತ್ನಮ್ಮ, ಮಹಾಲಕ್ಷ್ಮೀ, ಗೀತಾ, ಉದಯಕುಮಾರ್ ಇತರರಿದ್ದರು.