ಬಂಟರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಐಕಳ ಹರೀಶ್ ಶೆಟ್ಟಿ ಒತ್ತಾಯ

ikala
Published on



ಮಂಗಳೂರು : ರಾಜ್ಯ ಸರ್ಕಾರ ತಕ್ಷಣ 500 ಕೋಟಿ ರೂ. ಅನುದಾನದೊಂದಿಗೆ ಬಂಟರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಐಕಳ ಹರೀಶ್ ಶೆಟ್ಟಿ ಒತ್ತಾಯಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಕಳೆದ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಂಟರ ಅಭಿವೃದ್ಧಿ ನಿಗಮ ಸ್ಥಾಪನೆಯ ಭರವಸೆ ನೀಡಲಾಗಿತ್ತು. ಉಡುಪಿಯಲ್ಲಿ ಕಳೆದ ಅಕ್ಟೋಬರ್‌ನಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಬಜೆಟ್‌ನಲ್ಲಿ ಬಂಟರ ಅಭಿವೃದ್ಧಿ ನಿಗಮ ಸ್ಥಾಪಿಸಿ 500 ಕೋಟಿ ರೂ. ಮೀಸಲಿಡಲಾಗುವುದು ಎಂದು ಘೋಷಿಸಿದ್ದರು. ಆದರೆ, ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ ಎಂದರು.
ಬಂಟರಿಗೆ ಮೀಸಲಾತಿ ನೀಡಬೇಕು ಎಂದು ಹಿಂದಿನ ಬಿಜೆಪಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಂಟರಿಗೆ ಮೀಸಲಾತಿ ಹಾಗೂ ಬಂಟರ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಬಂಟ ಸಮಾಜದಲ್ಲಿ ಶೇ. 50ರಷ್ಟು ಮಂದಿ ಕಡುಬಡವರಿದ್ದು, ನಿಗಮದ ಮೂಲಕ ಸಮಾಜದ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಬೇಕಿದೆ. ನುಡಿದಂತೆ ನಡೆದಿದ್ದೇವೆ ಎನ್ನುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಬಂಟರ ಅಭಿವೃದ್ಧಿ ನಿಗಮವನ್ನು ತಕ್ಷಣ ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದರು.
ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜತೆ ಕಾರ್ಯದರ್ಶಿ ಚಂದ್ರಹಾಸ ಡಿ. ಶೆಟ್ಟಿ, ಮಾಧ್ಯಮ ಸಂಚಾಲಕ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.
.....................................

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net