

ಮೈಸೂರು: ನಗರದ ಸಿಗ್ಮಾ ಆಸ್ಪತ್ರೆಯಲ್ಲಿ ಶುಕ್ರವಾರ ಮೈಸೂರು ಇಂಡಿಯನ್ ಅಕಾಡೆಮಿ ಆಫ್ ಪೀಡಯಾಟ್ರೀಕ್ ಸಹಯೋಗದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆರಂಭವಾಯಿತು.
ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಎಸ್. ಜ್ಞಾನಶಂಕರ್ ಮಾತನಾಡಿ, ಮಗು ಆಗುವ ಮುನ್ನವೇ ಯುವಕ, ಯುವತಿಯರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸ್ತನ್ಯಪಾನದ ಬಗ್ಗೆ ಉಪನ್ಯಾಸ ನೀಡಿದರೆ ಹೆಚ್ಚು ಪ್ರಯೋಜನ ಆಗುತ್ತದೆ ಎಂದು ಹೇಳಿದರು.
ಸ್ತನ್ಯಪಾನ ಅಮೃತಕ್ಕೆ ಸಮಾನ, ಗರ್ಭಿಣಿ ಪೂರ್ವ, ಗರ್ಭಿಣಿಯರಲ್ಲಿ ಮತ್ತು ನಂತರ ಸ್ತನ್ಯಪಾನ ಹೆಚ್ಚಿಸುವ ಸಿರಿಧಾನ್ಯ ಮತ್ತು ಸಮತೂಕ ಆಹಾರ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಸಿಗ್ಮಾ ಆಸ್ಪತ್ರೆ ಹಿರಿಯ ಮಕ್ಕಳ ತಜ್ಞೆ ಡಾ.ಎಂ.ಎಸ್. ಕನ್ಯಾ ಮಾತನಾಡಿ, ಸ್ತನ್ಯಾಪಾನದ ಉಪಯುಕ್ತತೆ ಹಾಗೂ ತಾಯಂದಿರು ಸ್ತನ್ಯಾಪಾನ ಮಾಡಿಸುವಾಗ ಎದುರಿಸುವ ಹಾಗೂ ತೊಂದರೆಗಳ ನಿವಾರಣೆಗಳನ್ನು ವಿವರಿಸಿದರು.
ಮೈಸೂರು ಐಎಪಿ ಅಧ್ಯಕ್ಷ ಡಾ.ಎಂ.ಆರ್.ಪ್ರಶಾಂತ್, ಕಾರ್ಯದರ್ಶಿ ಡಾ.ಶಂಕರ್‌ಪ್ರಸಾದ್, ಖಜಾಂಚಿ ಡಾ. ತೃಪ್ತಿ ಅವರು ಸ್ತನ್ಯಪಾನದ ಬಗ್ಗೆ ಮಾಹಿತಿ ನೀಡಿದರು.
ಸ್ತ್ರೀರೋಗ ತಜ್ಞರಾದ ಡಾ. ಅಂಜಲಿ ಸಿದ್ದೇಶ್ ಹಾಗೂ ಡಾ.ಗೌರಿ ಹುಕ್ಕೇರಿ ಅವರು ಪಾಲಕರಿಗೆ ಸ್ತನ್ಯಪಾನ ಕುರಿತು ಸಲಹೆ ನೀಡಿದರು. ಸಿಗ್ಮಾ ಆಸ್ಪತ್ರೆ ನಿರ್ದೇಶಕಿ, ಡಾ. ರಾಜೇಶ್ವರಿ ಮಾದಪ್ಪ ಸ್ವಾಗತಿಸಿದರು. ನಿರ್ದೇಶಕಿ ಶೈಲಾ ಶಂಕರ್ ವಂದಿಸಿದರು. ಸಿಗ್ಮಾ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳು ಕಿರು ನಾಟಕದ ಮೂಲಕ ಉತ್ತಮ ಸಂದೇಶ ನೀಡಿದರು.