ವೈದ್ಯಕೀಯ ಕಾಲೇಜಿನಲ್ಲಿ ವಿಶ್ವ ಮೆದುಳು ದಿನಾಚರಣೆ

medulu dinacharane
Published on

ಮಡಿಕೇರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಡಗು, ಕರ್ನಾಟಕ ಮೆದುಳು ಅರೋಗ್ಯ ಉಪಕ್ರಮ, ರಾಷ್ಟ್ರೀಯ ಮಾನಸಿಕ ಅರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ ಬೆಂಗಳೂರು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆ ಮಡಿಕೇರಿ ಇವರ ಸಹಯೋಗದಲ್ಲಿ ವಿಶ್ವ ಮೆದುಳು ದಿನವನ್ನು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಸಾಮಾನ್ಯ ವೈದ್ಯ ಶಾಸ್ತ್ರ ವಿಭಾಗದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಸತೀಶ್ ಕುಮಾರ್, ಪ್ರಸ್ತುತ ಮಾನವನ ಆರೋಗ್ಯಕ್ಕೆ ಮೆದುಳಿನ ಆರೋಗ್ಯ ಪ್ರಮುಖವಾಗಿ ಬೇಕಾಗಿದೆ ಎಂದು ತಿಳಿಸಿದ ಅವರು, ಮೆದುಳನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಪ್ರತಿನಿತ್ಯ ಏನು ಮಾಡಬೇಕು ತಿಳಿಸಿದರು.


ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ವಿಶಾಲ್ ಕುಮಾರ್ ಮಾತನಾಡಿ, ಭಾರತದಲ್ಲಿ ನರವೈಜ್ಞಾನಿಕ ಕಾಯಿಲೆಗಳ ಹೊರೆ ಹೆಚ್ಚುತ್ತಿದೆ. ಪಾರ್ಶ್ವವಾಯು, ಬುದ್ಧಿಮಾಂದ್ಯತೆಗಳು ರೋಗದ ಹೊರೆ ಮತ್ತು ಮರಣಕ್ಕೆ ಪ್ರಮುಖ ಕೊಡುಗೆಗಳಾಗಿವೆ. ಅಪಸ್ಮಾರ, ತಲೆನೋವು, ಸೋಂಕುಗಳು, ತಲೆಗೆ ಗಾಯಗಳು ಮತ್ತು ಇತರ ನರವೈಜ್ಞಾನಿಕ ಅಸ್ವಸ್ಥತೆಗಳು ಸಹ ಅಂಗವೈಕಲ್ಯಕ್ಕೆ ಕಾರಣವಾಗುತ್ತಿದ್ದು ಇದರ ತುರ್ತು ಕ್ರಮದ ಅಗತ್ಯತೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ಕರ್ನಾಟಕ ಬ್ರೈನ್ ಹೆಲ್ತ್ ಇನಿಶಿಯೇಟಿವ್ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯಾದ್ಯಂತ ಬ್ರೈನ್ ಹೆಲ್ತ್ ಕ್ಲಿನಿಕ್‌ಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.


ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಆರ್.ವಿಕ್ರಮ್, ನರಸಂಬಂಧಿ ರೋಗಗಳ ಬಗ್ಗೆ ಹಾಗೂ ಕರ್ನಾಟಕ ಮೆದುಳು ಅರೋಗ್ಯ ಉಪಕ್ರಮದ ರೂಪುರೇಷೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಿದರು.


ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಂಗ ರಚನಾ ಶಾಸ್ತ್ರ ವಿಭಾಗದಿಂದ ಮೆದುಳಿನ ಮಾದರಿಗಳನ್ನು ಆಸ್ಪತ್ರೆಯಲ್ಲಿ ಪ್ರದರ್ಶಿಸಿ ಅಗತ್ಯ ಮಾಹಿತಿಯನ್ನು ಡಾ ರೋಶಿನಿಯವರು ನೀಡಿದರು. ಕಾರ್ಯಕ್ರಮದಲ್ಲಿ ಸಾಮಾನ್ಯ ಮೆದುಳಿನ ಕಾಯಿಲೆಗಳ ಗುರುತಿಸುವಿಕೆ, ತಲೆ ನೋವು, ಮೂರ್ಛೆ ರೋಗ, ಪಾರ್ಶ್ವಾವಾಯು, ಮರೆವಿನ ಕಾಯಿಲೆಗಳ ಬಗ್ಗೆ ಮಾಹಿತಿ ಒದಗಿಸಲಾಯಿತು.


ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ಸೋಮಶೇಖರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಂಜುಂಡಯ್ಯ, ಮುಖ್ಯ ಆಡಳಿತಾಧಿಕಾರಿ ರೋಹಿಣಿ, ವೈದ್ಯಶಾಸ್ತ್ರ ವಿಭಾಗದ ಪ್ರಾದ್ಯಾಪಕ ಡಾ.ಲೋಕೇಶ್ ಸೇರಿದಂತೆ ವೈದ್ಯೆರು, ಬೋಧಕೇತರ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net