

ಮಂಡ್ಯ: ಶಿಸ್ತುಬದ್ಧವಾದ ಓದಿನ ಮೂಲಕ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಬಹುದು ಎಂದು ಪುಸ್ತಕ ಸಂಗ್ರಹಗಾರ ಎಂ.ಅಂಕೇಗೌಡ ಅಭಿಪ್ರಾಯಪಟ್ಟರು.
ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಆಂಗ್ಲ ವಿಭಾಗ, ಐಕ್ಯೂಎಸಿ ಮತ್ತು ಗ್ರಂಥಾಲಯ ವಿಭಾಗದ ಸಂಯುಕ್ತಾಶ್ರಯದಲ್ಲಿ ವಿಲಿಯಮ್ ಶೇಕ್ಸ್‌ಪಿಯರ್ ಜಯಂತಿ ಮತ್ತು ವಿಶ್ವ ಪುಸ್ತಕ ದಿನದ ಅಂಗವಾಗಿ ಆಯೋಜಿಸಿದ್ದ ಪುಸ್ತಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪ್ರತಿದಿನ ಮೂರರಿಂದ ನಾಲ್ಕು ಗಂಟೆ ಚಾಚು ತಪ್ಪದೇ ಓದಿದರೆ ಸಾಧನೆಯ ಶಿಖರಕ್ಕೆ ತಲುಪಬಹುದು. ಆಗ ಯಶಸ್ಸು ನಿಮ್ಮದಾಗುತ್ತದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಸಂಶಯಗಳನ್ನು ಪ್ರಾಧ್ಯಾಪಕರ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಹಿಂದೆ ಸಾಮ್ರಾಜ್ಯಕ್ಕಾಗಿ ರಾಜರು ತಮ್ಮ ಕೈಬಲಗಳ ಮೂಲಕ ಅಧಿಕಾರವನ್ನು ಪಡೆಯುತ್ತಿದ್ದರು. ಅನಂತರ ಹಣ ಬಲದ ಮೂಲಕ ಶ್ರೀಮಂತರು ಅಧಿಕಾರಕ್ಕೆ ಬರುತ್ತಿದ್ದರು. ಆದರೆ ಇಂದು ಜ್ಞಾನವೇ ಎಲ್ಲದಕ್ಕೂ ದೊಡ್ಡದು. ಆ ಕಾರಣದಿಂದ ಉತ್ತಮವಾದ ಜ್ಞಾನವನ್ನು ಸಂಪಾದಿಸಿಕೊಂಡರೆ ಜಗತ್ತು ನಿಮ್ಮ ಹಿಂದೆ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಒಳ್ಳೆಯ ವಿದ್ಯಾರ್ಥಿ ಆಗಬೇಕಾದರೆ ಉತ್ತಮವಾದ ಸ್ನೇಹಿತರು ಜತೆ ಇರಬೇಕು. ಹಿಂದೆ ಓದಲು ಪುಸ್ತಕಗಳು ಅಷ್ಟಾಗಿ ಸಿಗುತ್ತಿರಲಿಲ್ಲ. ಆದರೆ ಇಂದು ತಂತ್ರಜ್ಞಾನದಿಂದ ಕ್ಷಣಾರ್ಧದಲ್ಲಿ ಪಡೆದುಕೊಳ್ಳಬಹುದು. ಮೊಬೈಲ್ ಅನ್ನು ಸಕಾರಾತ್ಮಕ ವಿಷಯಗಳ ಆಯ್ಕೆಗೆ ಬಳಸಿಕೊಳ್ಳಿ. ವಿದ್ಯಾರ್ಥಿಗಳು ಎಷ್ಟು ಸಕಾರಾತ್ಮಕವಾಗಿರುತ್ತಿರೋ ಅಷ್ಟು ಸಾಧನೆಗೆ ಹತ್ತಿರವಾಗುತ್ತಾರೆ. ಐದು ವರ್ಷ ಶ್ರಮಪಟ್ಟರೆ 50 ವರ್ಷ ಸುಖವಾಗಿ ಇರಬಹುದು. ಪ್ರಪಂಚದಲ್ಲಿ ಸುಮಾರು 4 ಸಾವಿರ ಭಾಷೆಗಳಿವೆ. ಅದರಲ್ಲಿ 20 ಭಾಷೆಗಳು ಉತ್ಕೃಷ್ಟವಾದವು. ಈ ಪೈಕಿ ನಮ್ಮ ಕನ್ನಡವೂ ಒಂದು ಎಂಬುದು ಖುಷಿಯ ವಿಚಾರ. ಕನ್ನಡ ಭಾಷೆಯಲ್ಲಿ ಎಲ್ಲವೂ ಇದ್ದು, ಇದನ್ನು ಲಿಪಿಗಳ ರಾಣಿ ಎಂದು ಕರೆಯಬಹುದು. ಆದಿಚುಂಚನಗಿರಿ ಸಂಸ್ಥಾನದಲ್ಲಿ ಡಾ.ನಿರ್ಮಲಾನಂದ ಸ್ವಾಮೀಜಿ ಅವರ ಆದೇಶದ ಮೇರೆಗೆ ಶೇಕ್ಸ್‌ಪಿಯರ್ ಅವರ 1800 ಪುಸ್ತಕ ಪ್ರದರ್ಶನ ಮಾಡಿದ್ದೆ. ಆಗ ದೆಹಲಿಯಿಂದ ಬಂದಂತಹ ವಿಶೇಷ ಅತಿಥಿ ಚೋಪ್ರಾ ಅವರು ನನ್ನ ಪುಸ್ತಕ ಸಂಗ್ರಹವನ್ನು ಕಂಡು ಆಶ್ಚರ್ಯಚಕಿತರಾಗಿ ನಂತರ ದೆಹಲಿಯ ವೀಕ್ಲಿ ನಿಯತಕಾಲಿಕಕ್ಕೆ ನನ್ನ ಪುಸ್ತಕ ಸಂಗ್ರಹದ ಬಗ್ಗೆ ಬರೆದಿದ್ದರು. ವೀಕ್ಲಿ ನಿಯತ ಕಾಲಿಕದಲ್ಲಿ ಪುಸ್ತಕ ಸಂಗ್ರಹದ ಕುರಿತು ವಿಸ್ತೃತವಾದ ಲೇಖನವು ಬಂದ ನಂತರ ಲಿಮ್ಕಾ ದಾಖಲೆಯಾಯಿತು ಎಂದರು.
ಪ್ರಾಂಶುಪಾಲ ಡಾ.ಕೆ.ಗುರುರಾಜಪ್ರಭು, ಐಕ್ಯೂಎಸಿ ಸಂಚಾಲಕಿ ಡಾ.ಬಿ.ಜಯಲಕ್ಷ್ಮೀ, ಆಂಗ್ಲ ವಿಭಾಗದ ಮುಖ್ಯಸ್ಥ ಡಾ.ಟಿ.ಆರ್.ದೀಪಕ್, ಸಹಾಯಕ ಪ್ರಾಧ್ಯಾಪಕರಾದ ಕೆ.ಎಂ.ಪ್ರಸನ್ನಕುಮಾರ್, ಎಸ್.ನವೀನ್, ಪಿ.ಎನ್.ನಾಗರಾಜಮೂರ್ತಿ, ಗ್ರಂಥಾಲಯ ವಿಭಾಗದ ಮುಖ್ಯಸ್ಥ ವೈ.ಎಚ್.ಜನಾರ್ಧನ್, ಉಪನ್ಯಾಸಕರಾದ ಎಂ.ಸಿ.ಸುರೇಶ್, ರಮ್ಯಾ, ಪತ್ರಾಂಕಿತ ವ್ಯವಸ್ಥಾಪಕ ಕೆ.ಪಿ.ರವಿಕಿರಣ್ ಇದ್ದರು. ಇದೇ ವೇಳೆ ಶೇಕ್ಸ್‌ಪಿಯರ್ ಅವರ ನೂರಕ್ಕೂ ಹೆಚ್ಚು ವಿವಿಧ ರೀತಿಯ ಭಾವಚಿತ್ರ, ನಾಟಕ, ಪುಸ್ತಕವನ್ನು ಪ್ರದರ್ಶಿಸಲಾಗಿತ್ತು. ವಿದ್ಯಾರ್ಥಿಗಳು ಮಹಿಳಾ ದೌರ್ಜನ್ಯ ವಿಷಯದ ಕುರಿತಾಗಿ ನಾಟಕ ಪ್ರದರ್ಶಿಸಿದರು.