

ಹುಬ್ಬಳ್ಳಿ: ಇಲ್ಲಿಯ ಅಮನ್ ಫೌಂಡೇಷನ್ ವತಿಯಿಂದ ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.
ವಿವಿಧ ವೀರ ಸ್ವಾತಂತ್ರ್ಯ ಹೋರಾಟಗಾರರ ಪರಿಚಯ, ಮಕ್ಕಳ ಶೈಕ್ಷಣಿಕ ಕಥೆಗಳು ಹಾಗೂ ಪದ್ಯಗಳು, ಒಲವಿನ ಕವಿತೆಗಳು, ಅಣ್ಣ ಬಸವಣ್ಣನವರ ವಚನಗಳು, ಕನ್ನಡ ಶಬ್ದಾರ್ಥಕೋಶ, ನುಡಿಗಟ್ಟುಗಳು, ಭಾವಗೀತೆಗಳು, ಕನ್ನಡ ನಿಬಂಧಗಳು, ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ, ಜನರಲ್ ನಾಲೆಜ್ ಪುಸ್ತಕಗಳು, ಕನ್ನಡ ಸಮಾನಾರ್ಥಕ ಪದಗಳು, ಕರ್ನಾಟಕದ ಪ್ರವಾಸಿ ತಾಣಗಳು ಸೇರಿದಂತೆ ಮಕ್ಕಳಿಗೆ ನೈತಿಕ ಪಾಠಗಳನ್ನು ಹೇಳಿಕೊಡುವ 36 ತರಹದ ವಿವಿಧ ಪುಸ್ತಕಗಳನ್ನು ನೀಡಲಾಯಿತು.
ಹಳೇಹುಬ್ಬಳ್ಳಿ ಆನಂದ ನಗರ, ಗುರುನಾಥ ನಗರ, ಸ್ಟೇಶನ್ ರಸ್ತೆ, ಕೊಪ್ಪಿಕರ ರಸ್ತೆ ಹಾಗೂ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿ ಮಕ್ಕಳು, ಮಹಿಳೆಯರು, ಯುವಕರು, ವೃದ್ಧರು, ಆಟೊ ಚಾಲಕರು, ಅಂಗಡಿಕಾರರು, ವಾಹನ ಸವಾರರಿಗೆ ಉಚಿತ ಪುಸ್ತಕ ವಿತರಿಸಲಾಯಿತು.
ಅಮನ್ ಫೌಂಡೇಷನ್ ಅಧ್ಯಕ್ಷ ನವೀದ್ ಮುಲ್ಲಾ, ಗೌರವ ಕಾರ್ಯದರ್ಶಿ ರಫೀಕ ಚವ್ಹಾಣ, ನಿರ್ದೇಶಕರಾದ ಯಶವಂತ ಪಾಟೀಲ್, ಸುಹೇಲ್ ಪಠಾಣ, ವಿರೇಶ ಗೆಜ್ಜಲಗಟ್ಟಿ, ಅಬ್ದುಲ್ಲಾ ಮಕಾನದಾರ, ಜಮೀರ ಹುಡೇದ ಉಪಸ್ಥಿತರಿದ್ದರು.