ರಕ್ತದಾನದಿಂದ ಆಪತ್ತಿನಲ್ಲಿರುವ ಜೀವ ಉಳಿಸಲು ಸಾಧ್ಯ

udp-17-blood
Published on

ಉಡುಪಿ: ಅಪಘಾತ ಹಾಗೂ ಇನ್ನಿತರ ಕಾಯಿಲೆಗಳಿಂದ ಪ್ರಾಣಾಪಾಯದಲ್ಲಿರುವ ಜೀವ ಉಳಿಸಲು ರಕ್ತದಾನ ಅತೀ ಅಗತ್ಯವಾಗಿದ್ದು, ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ್​ ಜಿ. ಹುಬ್ಬಳ್ಳಿ ಹೇಳಿದರು.

ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಜಿಲ್ಲಾಡಳಿತ ಆಶ್ರಯದಲ್ಲಿ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ದೇಶದಾದ್ಯಂತ ಆಸ್ಪತ್ರೆಗಳಲ್ಲಿ ಪ್ರತಿದಿನ ಸೂಕ್ತ ರಕ್ತದ ಗುಂಪಿನ ಕೊರತೆಯಿಂದ ರಕ್ತಸ್ರಾವವಾಗಿ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗಿದೆ. ರಕ್ತದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಮಾಹಿತಿಯ ಕೊರತೆ ಇದೆ. ರಕ್ತದಾನದಿಂದಾಗುವ ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ರಕ್ತದಾನ ಶ್ರೇಷ್ಠದಾನವಾಗಿದ್ದು, ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ. ಅದನ್ನು ಕೃತಕವಾಗಿ ತಯಾರಿಸಲೂ ಸಾಧ್ಯವಿಲ್ಲ. ವ್ಯಕ್ತಿಯು ಪ್ರತಿ ಮೂರು ತಿಂಗಳಿಗೊಮ್ಮೆ ಒಂದು ಬಾರಿಯಾದರೂ ರಕ್ತದಾನ ಮಾಡಿದ್ದಲ್ಲಿ ದೇಹದಲ್ಲಿ ಹೊಸ ರಕ್ತ ಉತ್ಪಾದನೆ ಆಗುತ್ತದೆ. ಜೊತೆಗೆ ಹೃದಯಾಘಾತ, ಕ್ಯಾನ್ಸರ್​, ಸೇರಿದಂತೆ ಹಲವು ಕಾಯಿಲೆಗಳಿಂದ ದೂರ ಉಳಿಯಬಹುದು ಎಂದರು.

ಜಿಲ್ಲಾ ಸರ್ಜನ್​ ಡಾ. ಎಚ್​. ಅಶೋಕ್​ ಮಾತನಾಡಿ, ಉಡುಪಿ ರಕ್ತದಾನಿಗಳ ಜಿಲ್ಲೆಯ ಎಂದು ಗುರುತಿಸಲ್ಪಟ್ಟಿದೆ. ಜಿಲ್ಲೆಯಲ್ಲಿ ಹೆಚ್ಚು ಜನರು ರಕ್ತದಾನ ಮಾಡಲು ಮುಂದೆ ಬರುತ್ತಿದ್ದಾರೆ. ನೆರೆಯ ಜಿಲ್ಲೆಯವರು ರಕ್ತವನ್ನು ಕೊಂಡೊಯ್ಯುತ್ತಾರೆ. ವಿದ್ಯಾರ್ಥಿಗಳು ಜೀವನದಲ್ಲಿ ರಕ್ತದಾನ ಮಾಡುವ ಹ್ಯವಾಸಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಪ್ರಾಂಶುಪಾಲೆ ಡಾ.ಮಮತಾ ಕೆ.ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಏಡ್ಸ್​ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಎಸ್​.ವಿ ಪ್ರತಿಜ್ಞಾ ವಿಧಿ ಬೋಧಿಸಿ, ಮಾತನಾಡಿದರು.

ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿರುವ ಲಕ್ಷಿಶ ಉಡುಪ, ರೂಪಾ ಬಲ್ಲಾಳ್​, ಕಾರ್ತಿಕ್​ ನಾಯ್ಕ್​ ಹಾಗೂ ಗಿರಿಜ ಸುವರ್ಣ ಇವರನ್ನು ಸನ್ಮಾನಿಸಲಾಯಿತು. ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್​ ಬಿ., ಎಸ್​ ಡಿಎಂ ಮುಖ್ಯ ವೈದ್ಯಕಿಯ ಅಧೀಕ್ಷಕ ಡಾ. ನಾಗರಾಜ್​ ಎಸ್​., ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ವೀಣಾಕುಮಾರಿ, ಜೆಸಿಐ ಅಲೂಮಿನಿ ಕ್ಲಬ್​ ಅಧ್ಯಕ್ಷೆ ಆಶಾ ಅಲೆನ್​ ವಾಜ್​ ಮತ್ತಿತರರು ಉಪಸ್ಥಿತರಿದ್ದರು. ಡಾ.ವಿದ್ಯಾಲಕ್ಷಿ$್ಮ ಸ್ವಾಗತಿಸಿ, ಜಿಲ್ಲಾ ಕಾರ್ಯಕ್ರಮ ಮೇಲ್ವಿಚಾರಕ ಮಹಾಬಲೇಶ್ವರ ನಿರೂಪಿಸಿ, ಯೂತ್​ರೆಡ್​ಕ್ರಾಸ್​ ಸಹಾಯಕ ಡೀನ್​ ಯೋಗೀಶ್​ ಆಚಾರ್ಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net