ವರ್ಷಕ್ಕೆ 20 ಮಿಲಿಯನ್ ಯೂನಿಟ್ ರಕ್ತ ಅವಶ್ಯ: ಮಿಮ್ಸ್ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ.ಯೋಗೇಂದರ್ ಪಟ್ವಾರಿ ಹೇಳಿಕೆ

World Blood Donor Day Mandya
Published on

ಮಂಡ್ಯ: ದೇಶದಲ್ಲಿ ಪ್ರತಿ ವರ್ಷ 20 ಮಿಲಿಯನ್ ಯೂನಿಟ್‌ನಷ್ಟು ರಕ್ತದ ಅವಶ್ಯಕತೆ ಇದೆ ಎಂದು ಮಿಮ್ಸ್ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ.ಯೋಗೇಂದರ್ ಪಟ್ವಾರಿ ಹೇಳಿದರು.

ತಾಲೂಕಿನ ಸಿದ್ದಯ್ಯನಕೊಪ್ಪಲು ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ವಿಭಾಗ, ಮಿಮ್ಸ್ ರಕ್ತನಿಧಿ ಕೇಂದ್ರ, ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ರಕ್ತವನ್ನು ಬೇರೆ ಮೂಲಗಳಿಂದ ಸಂಗ್ರಹಿಸಲಾಗದು. ಕೇವಲ ದಾನಿಗಳಿಂದ ಮಾತ್ರ ರಕ್ತ ಸಂಗ್ರಹ ಮಾಡಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ದಿಸೆಯಲ್ಲಿಯೇ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಹವ್ಯಾಸ ಬೆಳೆಸಿಕೊಳ್ಳುವಂತೆ ಪ್ರೇರೇಪಿಸಬೇಕು. ದಾನಿಗಳಿಂದ ಮಾತ್ರ ರಕ್ತ ಸಂಗ್ರಹಿಸಬಹುದು ಎನ್ನುವುದರ ಅರಿವು ಎಲ್ಲರಿಗೂ ಬರಬೇಕು. ಹಾಗಾದಾಗ ಮಾತ್ರ ಪ್ರಸ್ತುತದಲ್ಲಿ ಹೆಚ್ಚಿರುವ ರಕ್ತದ ಕೊರತೆ ನೀಗಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಂ.ಎಸ್.ಆಶಾಲತಾ ಮಾತನಾಡಿ, ಆರೋಗ್ಯವಂತ ಮನುಷ್ಯ ವರ್ಷಕ್ಕೆ ಎರಡು ಬಾರಿ ರಕ್ತ ದಾನ ಮಾಡಬಹುದು. ಕನಿಷ್ಟ ವರ್ಷಕ್ಕೆ ಒಂದು ಬಾರಿಯಾದರೂ ರಕ್ತದಾನ ಮಾಡುವುದರಿಂದ ಹೊಸ ರಕ್ತದ ಬೆಳವಣಿಗೆ ಸಾಧ್ಯವಾಗುತ್ತದೆ. ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರು ರಕ್ತದ ಅವಶ್ಯಕತೆ ಇದೆ ಎನ್ನುತ್ತಾರೆ. ಆದರೆ ಇಲ್ಲಿ ಸ್ವಲ್ಪ ಬದಲಾವಣೆ ಆಗಬೇಕಿದೆ. ಏನೆಂದರೆ ರಕ್ತ ತೆಗೆದುಕೊಂಡು ಬದಲಿ ರಕ್ತ ಕೊಡುವುದು ಮುಖ್ಯವಾಗಬೇಕು. ಇದರಿಂದ ಬೇರೆ ರೋಗಿಗಳಿಗೆ ಅನುಕೂಲವಾಗುತ್ತದೆ ಎಂದರು.

ಕಾವೇರಿ ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಸಂಗಮೇಶ್ವರ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಟ್ರಸ್ಟಿ ಪ್ರೊ.ಟಿ.ನಾಗೇಂದ್ರ, ಪ್ರಾಂಶುಪಾಲ ಪ್ರೊ.ಎ.ಎಸ್.ಶ್ರೀಕಂಠಪ್ಪ, ಉಪ ಪ್ರಾಂಶುಪಾಲ ಪ್ರೊ.ಆರ್.ಮಂಜುನಾಥ್, ಕಾರ್ಯದರ್ಶಿ ಸಿ.ಜೆ.ಗಂಗಾಧರಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net